ಭೂ ಸ್ವಾಧೀನ ಸೂಕ್ತ ಪರಿಹಾರಕ್ಕೆ ಆಗ್ರಹ
ಕೋಲಾರ,ಜು.೧-ವೇಮಗಲ್‌ನಲ್ಲಿ ೩ನೇ ಹಂತದ ಕೈಗಾರಿಕಾ ಅಭಿವೃದ್ಧಿಗೆ ಭೂ ಸ್ವಾಧೀನಾ ಮಾಡಿಕೊಳ್ಳುತ್ತಿರುವ ರೈತರ ಪ್ರತಿ ಎಕರೆಗೆ ೩ ಕೋಟಿರೂ ಪರಿಹಾರ ನೀಡಬೇಕು. ಇಲ್ಲವೇ ಒಂದು ಎಕರೆ ಬದಲಾಗಿ ೩ ಎಕರೆ ಕೃಷಿ ಜಮೀನನ್ನು ನೀಡಬೇಕು. ಮತ್ತು ಸ್ಥಳೀಯರಿಗೆ ಉದ್ಯೋಗ ನೀಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ರೈತಸಂಘದಿಂದ ಕೆಐಎಡಿಬಿ ಅಧಿಕಾರಿ ಅಪೂರ್ವ ಬಿದರೆ ಮತ್ತು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ತಾಲೂಕಿನ ವೇಮಗಲ್ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ರೈತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಈಗಾಗಲೇ ಭೂಸ್ವಾಧೀನವಾಗಿರುವ ಸಾವಿರಾರು ಎಕರೆ ಜಮೀನಿನಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗದೆ ಹಾಗೆಯೇ ಉಳಿದಿದೆ. ಇದರ ನಡುವೆ ೩ನೇ ಹಂತದ ಕೈಗಾರಿಕಾ ಅಭಿವೃದ್ಧಿಗೆ ರೈತರ ಕೃಷಿ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಬಲವಂತವಾಗಿ ರೈತರ ಕೃಷಿ ಜಮೀನನ್ನು ಕಾನೂನಿನ ಭಯಪಡಿಸಿ ಬಲವಂತದ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾದರೆ ಪ್ರೊ.ನಂಜುಂಡಸ್ವಾಮಿಯವರ ಬಾರ್‌ಕೋಲ್ ಚಳುವಳಿಯನ್ನು ಅಧಿಕಾರಿಗಳ ವಿರುದ್ಧ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
೧೦ ವರ್ಷಗಳ ಹಿಂದೆ ಭೂಸ್ವಾಧೀನವಾಗಿರುವ ರೈತರ ಭೂಪರಿಹಾರ ಪಡೆಯಲು ಎಲ್ಲಾ ದಾಖಲೆಗಳಿದ್ದರೂ ದಲ್ಲಾಳಿಗಳ ಮುಖಾಂತರ ಅಧಿಕಾರಿಗಳಿಗೆ ಶೇ.೧೦ ರಿಂದ ೧೫ ರಷ್ಟು ಕಮೀಷನ್ ನೀಡದೇ ಇದ್ದರೆ ಬಿಡುಗಡೆಯಾಗುತ್ತಿಲ್ಲ.
ಅಮಾಯಕ ರೈತರಿಗೆ ಹಣ ಬಿಡುಗಡೆ ಮಾಡುತ್ತೇವೆಂದು ನಿಮ್ಮ ಇಲಾಖೆಯ ಸುತ್ತ ೫೦ಕ್ಕೂ ಹೆಚ್ಚು ದಲ್ಲಾಳಿಗಳನ್ನು ನೇಮಿಸಿಕೊಂಡು ವ್ಯವಹಾರ ಮಾಡುತ್ತಿದ್ದೀರ ಎಂದು ಸಭೆಯಲ್ಲಿಯೇ ಆರೋಪ ಮಾಡುವ ಜೊತೆಗೆ ಭೂಸ್ವಾಧೀನಾ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಸಿಗದೆ ದಲ್ಲಾಳರಿಗೆ ನೇರ ಸಂಪರ್ಕದಲ್ಲಿ ಇದ್ದು, ಯಾವ ರೈತರು ಕರೆ ಮಾಡಿದರೂ ಸ್ವೀಕರಿಸುವುದಿಲ್ಲವೆಂದು ದೂರು ನೀಡುವ ಜೊತೆಗೆ ಸ್ಥಳೀಯವಾಗಿ ಪ್ರತಿ ತಿಂಗಳು ರೈತರ ಸಮಸ್ಯೆಯನ್ನು ಆಲಿಸಲು ಸಭೆ ಕರೆಯಬೇಕೆಂದು ಒತ್ತಾಯಿಸಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ಜಿಲ್ಲಾದ್ಯಂತ ಕೈಗಾರಿಕಾ ಪ್ರದೇಶಗಳಲ್ಲಿ ಹಿಂದುಳಿದ ದಲಿತ ಉದ್ಯಮಿಗಳನ್ನು ಆರ್ಥಿಕವಾಗಿ ಮುಂದೆ ಬರಲು ಸರ್ಕಾರ ೨ ಎಕರೆ ಮಂಜೂರು ಮಾಡುವ ಯೋಜನೆಯನ್ನು ಜಾರಿಗೆ ತಂದಿದ್ದು, ಆ ಯೋಜನೆ ಬಡ, ದಲಿತ, ಅಮಾಯಕರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಬೆಂಗಳೂರು ಭೂಗಳ್ಳರಿಗೆ ಮಂಜೂರು ಮಾಡುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯ ಮಾಡಿದರು.
ಕೈಗಾರಿಕೆಗೆ ಭೂಮಿ ಕೊಟ್ಟಿರುವ ರೈತ ಕುಟುಂಬಗಳಿಗೆ ಕಡ್ಡಾಯ ಉದ್ಯೋಗ ಕೊಡಬೇಕೆಂಬ ನಿಯಮ ಇದ್ದರೂ ಕೈಗಾರಿಕಾ ಮಾಲೀಕರು ಸ್ಥಳೀಯರ ಉದ್ಯೋಗವನ್ನು ಹೊರರಾಜ್ಯದ ಕಾರ್ಮಿಕರಿಗೆ ಮಾರಾಟ ಮಾಡಿ, ಉದ್ಯೋಗ ಕೇಳಿದರೆ ಕಾರ್ಖಾನೆ ಕಾಯುವಂತೆ ಬೇಜವಾಬ್ದಾರಿ ಉತ್ತರ ನೀಡುವ ಜೊತೆಗೆ ನಿಮ್ಮ ಭೂಮಿಗೆ ಕೋಟಿಕೋಟಿ ಹಣ ಕೊಟ್ಟಿದ್ದೇವೆ. ಕೆಲಸ ಬೇಕಾದರೆ ಮುಖ್ಯಮಂತ್ರಿಗಳ ಮನೆಗೆ ಹೋಗಿ ಕೇಳಿಕೊಳ್ಳಿ ಎಂದು ರೈತರ ಮೇಲೆ ದೌರ್ಜನ್ಯ ಮಾಡುತ್ತಾರೆಂದು ಸಭೆಯಲ್ಲಿ ದೂರು ನೀಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ವೇಮಗಲ್ ಹೋಬಳಿ ಪ್ರಧಾನ ಕಾರ್ಯದರ್ಶಿ ನಟರಾಜ್, ಗೋವಿಂದಪ್ಪ, ಗಣೇಶ್, ಹೋಬಳಿ ಅಧ್ಯಕ್ಷ ಅಮರನಾರಾಯಣ, ಗಿರೀಶ್ ಮುಂತಾದವರಿದ್ದರು.