ಅರ್ಥ ಮಾಡಿಕೊಂಡಲ್ಲಿ ಪಾಠ ಮನದಟ್ಟು”
ದಾವಣಗೆರೆ ಜೂ. 30; ಶಾಲಾ ಕಾಲೇಜು ವಿದ್ಯಾರ್ಥಿಗಳು ಅಂದಂದಿನ ಪಾಠ ಪ್ರವಚನಗಳನ್ನು ಅಂದೇ ಅರ್ಥ ಮಾಡಿಕೊಂಡಲ್ಲಿ ಮನದಟ್ಟಾಗುವುದಷ್ಟೇ ಅಲ್ಲ ಪರೀಕ್ಷಾಭಯವೂ ಇರುವುದೇ ಇಲ್ಲ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ ಕಿವಿಮಾತು ಹೇಳಿದರು. ಅವರಿಂದು ನಗರದ ಬಾಡ ಕ್ರಾಸ್ ನಲ್ಲಿರುವ ಜೈನ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಾಡಾಗಿದ್ದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಯಾವ ಪಠ್ಯಗಳೂ ಆಯಾ ತರಗತಿಗಳ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಮೀರಿ ರಚನೆಯಾಗಿರುವುದಿಲ್ಲ ಆದರೂ ಅರ್ಥವಾಗುವುದಿಲ್ಲ ಎಂಬುದಕ್ಕೆ ನಿರಾಸಕ್ತಿಯೇ ಕಾರಣ, ಇದು ಮುಂದೆ ಪರೀಕ್ಷಾಭಯವನ್ನು ತಂದೊಡ್ಡುತ್ತದೆ, ಆದ್ದರಿಂದ ಅಂದಂದಿನ ಪಾಠ ಪ್ರವಚನಗಳನ್ನು ಅಂದಂದೇ ಅರ್ಥಮಾಡಿಕೊಳ್ಳಬೇಕು, ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು. ಹಿರಿಯ ವಿದ್ಯಾರ್ಥಿಗಳು ಕಿರಿಯರನ್ನು ಸ್ವಾಗತಿಸಿ ಮಾರ್ಗದರ್ಶಿಸುವುದು ನಮ್ಮ ಸನಾತನ ಗುರುಕುಲ ಪದ್ದತಿಯಿಂದಲೂ ನಡೆದು ಬಂದ ಸತ್ಸಂಪ್ರದಾಯವಾಗಿದ್ದು ಈ ಕಾಲೇಜಿನಲ್ಲೂ ಹಿರಿಯ ವಿದ್ಯಾರ್ಥಿಗಳು ಕಿರಿ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿರುವುದು ಯೋಗ್ಯವಾಗಿದೆ ಎಂದರು.   ಮುಖ್ಯ ಅತಿಥಿಗಳಾಗಿ ಮಾತನಾಡಿದ ಜೈನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಚಲ್ ಚಂದ್ ಜೈನ್ ರವರು ಭಾರತ ದೇಶವು ಜ್ಞಾನದ ನಿಧಿಯಾಗಿದೆ, ವಿದ್ಯಾರ್ಥಿಗಳು ಗುಂಪು ಚರ್ಚೆಯ ಮೂಲಕ ಪಠ್ಯ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಸೂಕ್ತ ಮಾರ್ಗ ಎಂದರು.   ಕಾಲೇಜಿನ ಪ್ರಾಂಶುಪಾಲ ಕೆ ಎಸ್ ರಘು ಅಧ್ಯಕ್ಷೀಯ ನುಡಿಗಳನ್ನಾಡಿದರು.  ಅಧ್ಯಾಪಕಿಯರಾದ ಶ್ವೇತಾ ಹಾಗೂ ಪಾವನಾ ಅತಿಥಿಗಳ ಪರಿಚಯ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು.