ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಪೊಲೀಸ್ ವರಿಷ್ಠಾಧಿಕಾರಿ
ಗದಗ,ಜೂ30: ಜನಸಾಮಾನ್ಯರ ದೈನಂದಿನ ಸಂಚಾರಕ್ಕೆ ಯಾವುದೇ ತರಹದ ಅಡೆತಡೆಯಾಗದಂತೆ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಸಾಧ್ಯವಾದಷ್ಟು ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಪೆÇಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಅವರು ಸೂಚಿಸಿದರು.
ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಿಗದಿಪಡಿಸಿದ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ ನಿರ್ಮಾಣ , ಬ್ರಿಡ್ಜ್ ನಿರ್ಮಾಣ , ಚರಂಡಿ ನಿರ್ಮಾಣ, ಬೀದಿದೀಪ ಕಾಮಗಾರಿಗಳನ್ನು ಇಲಾಖೆಯ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಗುತ್ತಿಗೆದಾರರು ಪೂರ್ಣಗೊಳಿಸಬೇಕು. ಈ ಬಗ್ಗೆ ಅನುಷ್ಟಾನ ಇಲಾಖೆಗಳು ನಿರಂತರ ನಿಗಾ ವಹಿಸುವ ಮೂಲಕ ಕಾಮಗಾರಿ ಪೂರ್ಣಗೊಳಿಸುವಲ್ಲಿ ಗಮನ ಹರಿಸಬೇಕು ಎಂದರು.
ಸಂಚಾರ ವ್ಯವಸ್ಥೆಗೆ ಅಭಿವೃದ್ಧಿ ಕಾಮಗಾರಿಗಳು ಅಡೆತಡೆಯಾಗಬಾರದು. ವಿನಾಕಾರಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ವಿಳಂಬ ಧೋರಣೆ ಅನುಸರಿಸಬಾರದು. ಕಾಮಗಾರಿ ಸ್ಥಳದಲ್ಲಿ ಸಾರ್ವಜನಿಕರ ಓಡಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಮೂಲಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಇದಾವುದನ್ನೂ ಮಾಡದೇ ಕಾಮಗಾರಿ ಕೈಗೊಂಡರೆ ಅಪಘಾತವಾದಲ್ಲಿ ಅಥವಾ ಜನಜಾನುವಾರು ಜೀವಹಾನಿಯಾದಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳನ್ನೇ ಹೊಣೆ ಗಾರರನ್ನಾಗಿಸುವ ಮೂಲಕ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಜಿಲ್ಲಾ ಪೆÇಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಅವರು ನೀಡಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಸಭೆಯ ಅಧ್ಯಕ್ಷತೆ ವಹಿಸಿ ಸಂಚಾರಿ ನಿಯಮಗಳ ಪಾಲನೆ ಮಾಡಲು ಸಾರ್ವಜನಿಕರಿಗೆ ನಿಗದಿತ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ನೀಡಬೇಕು. ರಸ್ತೆ ತಿರುವುಗಳಲ್ಲಿ, ಶಾಲಾ ಕಾಲೇಜುಗಳ ಹತ್ತಿರದ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಿಂದ ಚಲಿಸುವಂತೆ ಮಾಡಲು ರಸ್ತೆ ತಡೆಗಳನ್ನು ಮಾರ್ಗಸೂಚಿಯನ್ವಯ ಮಾಡಬೇಕು. ಅವೈಜ್ಞಾನಿಕ ರಸ್ತೆ ತಡೆಗಳ ನಿರ್ಮಾಣ ಬೇಡ ಎಂದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಮಂಜುನಾಥ ಶಿರಾಳೆ, ನಗರಸಭೆ ಪೌರಾಯುಕ್ತ ಪ್ರಶಾಂತ ವರಗಪ್ಪನವರ, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಗಳು ಸೇರಿದಂತೆ ಇತರರು ಇದ್ದರು.