ಸಾಮಾಜಿಕ ಮಾಧ್ಯಮಗಳ ಸದುಪಯೋಗ ಅಗತ್ಯ
ಕಲಬುರಗಿ:ಜೂ.30: ಪ್ರಸಿದ್ಧ ಸಾಮಾಜಿಕ ಮಾಧ್ಯಮಗಳಾದ ವ್ಯಾಟ್ಸ್‍ಪ್, ಫೇಸ್‍ಬುಕ್, ಟ್ವಿಟರ್, ಇನ್ಸ್ರಾಗ್ರಾಮ್‍ನಂತಹ ಮುಂತಾದ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ಭಯ ಹುಟ್ಟಿಸುವ, ಕೋಮುಸಾಮರಸ್ಯ ಕದಡುವ ವಿಷಯಗಳು, ಸಂಗತಿಗಳು, ಉಪಯೋಗವಿಲ್ಲದ ಸಂದೇಶಗಳನ್ನು ಹರಡಿಸುವ ಬದಲು, ಸಮಾಜಮುಖಿ ಚಿಂತನೆಗಳು ಮತ್ತು ಸಮಾಜಕ್ಕೆ ಉಪಯೋಗವಾಗುವ ವಿಚಾರಗಳನ್ನು ವಿನಿಮಯ ಮಾಡುವ ವೇದಿಕೆಯನ್ನಾಗಿ ಇವುಗಳನ್ನು ಬಳಸಿಕೊಳ್ಳುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ವಿಶ್ವ ಸಾಮಾಜಿಕ ಮಾಧ್ಯಮಗಳ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಿವೃತ್ತ ಶಿಕ್ಷಕ ನವಾಬಖಾನ್ ಮಾತನಾಡಿ, ಸಾಮಾಜಿಕ ಮಾಧ್ಯಮಗಳಿಂದ ಇಂದು ಸಾಕಷ್ಟು ಅನಕೂಲವಾಗಿದ್ದು, ಜನರು ಅವುಗಳನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಜಿಲ್ಲಾ ಸರ್ಕಾರಿ ನೌಕರರ ಸಂಗದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪರಮೇಶ್ವರ ಬಿ.ದೇಸಾಯಿ, ಸಮಾಜ ಸೇವಕ ಧನರಾಜ ಮಾಲಿಪಾಟೀಲ, ಸೈಯಬಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.