ವಾಡಿಯಲ್ಲಿ ಕಲರ್ ಕಲರ್ ಕುಡಿಯುವ ನೀರು !
ವಾಡಿ,ಜೂ.30-ಪಟ್ಟಣದ ಕೆಲವು ಬಡಾವಣೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಕುಡಿಯುವ ನೀರಿನ ಪೈಪ್ ಒಡೆದು ಅದರಲ್ಲಿ ಚರಂಡಿ ನೀರು ಬೆರೆತು ನೀರಿನ ಬಣ್ಣ ಹಸಿರಾಗಿದೆ. ಕೊಡ ಟ್ಯಾಂಕ್‍ಗಳಲ್ಲಿ ಸಂಗ್ರಹಿಸಿ ಇಟ್ಟ ನೀರು ಗಬ್ಬು ವಾಸನೆ ಹೊಡೆಯುತ್ತಿರುವುದಲ್ಲದೆ, ನೀರು ಸಂಗ್ರಹಿಸಿ ಇಟ್ಟ ಮೂರ್ನಾಲ್ಕು ದಿನಗಳಲ್ಲಿಯೇ ಹುಳುಗಳಾಗುತ್ತಿವೆ.
ಇಂತಹ ನೀರು ಸೇವಿಸಿ ನಾಗರಿಕರು ಕೆಮ್ಮು, ಗಂಟಲು ಕೆರೆತ, ತುರಿಕೆ ಮತ್ತು ಹೊಟ್ಟೆ ನೋವಿನಿಂದ ಬಳಲುವಂತಾಗಿದೆ. ವಾಂತಿ-ಬೇಧಿ ಕಾಣಿಸಿಕೊಂಡು ಜನರು ಆಸ್ಪತ್ರೆಗೆ ಸೇರಬೇಕಾದ ಸ್ಥಿತಿ ಬಂದರೂ ಬರಬಹುದು.
ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದರೂ ನಾಗರಿಕರಿಗೆ ಶುದ್ಧವಾದ ನೀರು ಪೂರೈಕೆ ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪುರಸಭೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಇಲ್ಲದೇ ಹೋದಲ್ಲಿ ಪುರಸಭೆ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಶಕ್ತಿ ಕೇಂದ್ರದ ವೀರಣ್ಣ ಯಾರಿ ಎಚ್ಚರಿಸಿದ್ದಾರೆ.