ಸಸಿ ನೆಡುವ ಮೂಲಕ ಪರಿಸರ ಜಾಗೃತಿ
ಔರಾದ :ಜೂ.30: ಹುಟ್ಟು ಹಬ್ಬ ಮತ್ತು ಹಿರಿಯರ ಪುಣ್ಯಷ್ಮರಣೆ ಇನ್ನಿತರ ಕಾರ್ಯಕ್ರಮಗಳಲ್ಲಿ ಆಡಂಬರ ಮಾಡದೇ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪರಿಸರದ ಉಳಿವಿಗೆ ಮುಂದಾಗಬೇಕು ಎಂದು ಉಪ ವಲಯ ಅರಣ್ಯಾಧಿಕಾರಿ ರಘುನಾಥ ರಾಠೋಡ್ ಹೇಳಿದರು.
ತಾಲೂಕಿನ ನಾಗುರ(ಎಂ)ದಲ್ಲಿ ಶನಿವಾರ ಮಾನುರೆ ಪರಿವಾರದ ಸಹಯೋಗದಲ್ಲಿ ಮನೆ-ಮನೆಗೆ ಬಸವಜ್ಯೋತಿ ಹಾಗು ಪೂಜ್ಯ ಡಾ. ಚನ್ನಬಸವನಂದ ಮಹಾಸ್ವಾಮಿಜಿಗಳ ಗುರುವಂದನಾ ಕಾರ್ಯಕ್ರಮ ಹಾಗು ಮಾರುತ್ತೆಪ್ಪ ಮಾನೂರೆ ಅವರ ಪುಣ್ಯಸ್ಮರಣೆ ನಿಮಿತ್ಯ ಹಮ್ಮಿಕೊಂಡ 500 ಸಸಿಗಳ ನೆಡುವಿಕೆ ಹಾಗು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ಪೃಕ್ರತಿಯ ಮಡಿಲು ಚೆನ್ನಾಗಿರಬೇಕಾದರೇ ಸಸಿಗಳನ್ನು ಬೆಳೆಸಬೇಕು. ಪರಿಸರ ಜಾಗೃತಿ ಮತ್ತು ಪರಿಸರ ಸಂರಕ್ಷಣೆ ಇಂದಿನ ದಿನದಲ್ಲಿ ತುರ್ತು ಅಗತ್ಯವಾಗಿದೆ. ಶುಧ್ಧಗಾಳಿ, ಜಾಗತಿಕ ಹವಾಮಾನ, ತಾಪಮಾನವನ್ನು ಸುಸ್ಥಿತಿಯಲ್ಲಿ ಇಡಲು ಸಸಿಗಳನ್ನು ನೆಡುವುದರ ಜೋತೆಗೆ ಅವುಗಳನ್ನು ಸಂರಕ್ಷಿಸಬೇಕು ಎಂದರು.
ಬೆಂಗಳೂರು ಶ್ರೀ ಚನ್ನಬಸವೇಶ್ವರ ಜ್ಞಾನ ಪೀಠದ ಜಗದ್ಗುರು ಪೂಜ್ಯ ಶ್ರೀ ಡಾ. ಚನ್ನಬಸವನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಪೂಜ್ಯರ , ಹಿರಿಯರ ದಿನಚರಿಗಳಂದು ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಸಾಕಬೇಕು. ನಿಮಗೆ ಹುಟ್ಟಿದ ಮಗ ನಿಮಗೆ ಅನ್ನ ಹಾಕುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೇ ನೀವು ನೆಟ್ಟ ಗಿಡ ಕಡ್ಡಾಯವಾಗಿ ಯಾವುದೇ ತಾರತಮ್ಯ ಮಾಡದೇ ಶುದ್ಧ ಗಾಳಿ, ನೆರಳು, ಹಣ್ಣು ಹಂಪಲುಗಳನ್ನು ನೀಡುತ್ತದೆ. ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಜೊತೆಗೆ ಒಳ್ಳೆಯ ಶಿಕ್ಷಣ ನೀಡಬೇಕು. ಮನೆಯಲ್ಲಿ , ಸಮಾಜದಲ್ಲಿನ ಹಿರಿಯರಿಗೆ ಗೌರವ ನೀಡುವುದು ಕಲಿಸಬೇಕು. ಪ್ರತಿಯೊಬ್ಬರು ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮ ಬೆಳೆಸಿಕೊಂಡು ಹಸಿರು ವೃದ್ಧಿಸಲು ಪಣ ತೊಡಬೇಕು ಎಂದರು.
ಇದೇ ಸಂಧರ್ಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಜೂನ್ 8,9ರಂದು ಜಾಗತಿಕ ಮಟ್ಟದ ಬಸವ ತತ್ವ ಪ್ರಚಾರ ಪಸರಿಸಿ, ತವರೂರಿಗೆ ಆಗಮಿಸಿದ ಬೆಂಗಳೂರು ಶ್ರೀ ಚನ್ನಬಸವೇಶ್ವರ ಜ್ಞಾನ ಪೀಠದ ಜಗದ್ಗುರು ಪೂಜ್ಯ ಶ್ರೀ ಡಾ. ಚನ್ನಬಸವನಂದ ಮಹಾಸ್ವಾಮಿಜಿ ಮತ್ತು ಬೀದರ ಬಸವ ಮಂಟಪದ ಪೂಜ್ಯ ಶ್ರೀ ಸತ್ಯವತಿ ಮಾತಾಜಿ ಅವರಿಗೆ ಗುರುವಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ, ಉಪ ವಲಯ ಅರಣ್ಯಾಧಿಕಾರಿ ರಘುನಾಥ ರಾಠೋಡ್, ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ಯೋಗ ಶಿಕ್ಷಕ ಯೋಗೆಂದ್ರ ಯದಲಾಪೂರೆ, ಬೀದರ್ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದರ್ ಬಿರಾದರ್, ಜಿಲ್ಲಾ ನ್ಯಾಯಲಯ ಮಾಜಿ ಸರಕಾರಿ ವಕೀಲ ಸಂಜುಕುಮಾರ್ ಸಜ್ಜನ್, ಗ್ರಾಪಂ ಸದಸ್ಯ ರಾಜಕುಮಾರ್ ಮಾನೂರೆ, ಮಲ್ಲಿಕಾರ್ಜುನ ಜೈಲರ್, ಶಿವರಾಜ್ ಜುಕಾಲೆ, ಶರಣಪ್ಪ ಪಾಟೀಲ್, ರಾಜಕುಮಾರ್ ಖ್ಯಾಮಾ ಇತರರಿದ್ದರು.
ಸಂಜೆಪ್ಪ ಮಾನೂರೆ ಸ್ವಾಗತಿಸಿದರು. ಅಶೋಕ ಮಾನೂರೆ ವಂದಿಸಿದರು. ಶಿವರಾಜ್ ಮಾನೂರೆ ನಿರೂಪಣೆ ಮಾಡಿದರು.