ರೈತರ ಏಳಿಗೆಗಾಗಿ ಶ್ರಮಿಸಿ:ಡಾ. ಎಸ್. ಡಿ. ಬಿರಾದಾರ
ವಿಜಯಪುರ ಜೂ.30: ನಗರದ ಹೊರವಲಯದ ಹಿಟ್ನಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ 15 ದಿವಸಗಳ ಸಮಗ್ರ ಪೋಷಕಾಂಶ ನಿರ್ವಹಣೆ ಸರ್ಟಿಫಿಕೇಟ್ ಕೋರ್ಸನ ಸಮಾರೋಪ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್. ಡಿ. ಬಿರಾದಾರ ಮಾತನಾಡಿ, ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಪಿ.ಕೆ.ಪಿ.ಎಸ್. ಸಂಘದ ಕಾರ್ಯನಿರ್ವಾಹಕರಿಗೆ ಅಬಿನಂದಿಸಿ, ಯಾವಾಗಲೂ ರೈತರಿಗೆ ಅಗತ್ಯವಾದ ಪರಿಕರಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಿ, ಅವರಿಗೆ ತರಬೇತಿಯಲ್ಲಿ ಪಡೆದ ಜ್ಞಾನವನ್ನು ಉಪಯೋಗಿಸಿ, ಸೂಕ್ತ ತಾಂತ್ರಿಕ ಸಲಹೆ ನೀಡಲು ತಿಳಿಸಿದರು. ಮುಂಬರುವ ದಿನಗಳಲ್ಲಿ ರೈತರ ಬೆಳೆ ಸಾಲವನ್ನು ಈಗಿರುವುದಕ್ಕಿಂತ ಹೆಚ್ಚಿಗೆ ಮಾಡಿ ಅವರಿಗೆ ಕೃಷಿ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲ ಕಲ್ಪಿಸಲಾಗುವುದೆಂದರು. ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ತರಬೇತಿಯಲ್ಲಿ ಪಡೆದ ಜ್ಞಾನವನ್ನು ರೈತರ ಅಭ್ಯುದಯಕ್ಕಾಗಿ ಬಳಸಿಕೊಳ್ಳಬೇಕು, ತಮ್ಮ ವ್ಯಾಪ್ತಿಯಲ್ಲಿ ಇಲಾಖೆಗಳು ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಬೇಕು ಮತ್ತು ಇಲಾಖೆ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎಸ್. ಎಮ್. ವಸ್ತ್ರದ ಮಾತನಾಡಿ, ರೈತರಿಗೆ ಮಾಹಿತಿ ನೀಡಲು ಅನುಕೂಲವಾಗಲು ವಿವಿಧ ಸಮೂಹ ಮಾಧ್ಯಮಗಳ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ಕೃಷಿ ತಾಂತ್ರಿಕತೆಗಳನ್ನು ರೈತರು ಅಳವಡಿಸಿಕೊಳ್ಳಲು ಶ್ರಮಿಸಬೇಕೆಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಉಪ ನಿರ್ದೇಶಕ ಡಾ. ಬಾಲರಾಜ ಬಿರಾದಾರ ಮಾತನಾಡಿ, 15 ದಿನಗಳ ತರಬೇತಿ ಅವಧಿಯಲ್ಲಿ ವಿವಿಧ ಸಸ್ಯ ಪೋಷಕಾಂಶಗಳು, ಮಣ್ಣು ಮತ್ತು ನೀರಿನ ಮಾದರಿ ಸಂಗ್ರಹಣೆ, ಪ್ರಾಯೋಗಿಕ ಎರೆಗೊಬ್ಬರ ತಯಾರಿಕೆ, ರಸಗೊಬ್ಬರಗಳನ್ನು ಮತ್ತು ಮಣ್ಣು ಸುಧಾರಕಗಳನ್ನು ಗುರುತಿಸುವುದು, ಮಣ್ಣಿನಲ್ಲಿ ಲಘು ಪೋಷಕಾಂಶಗಳ ವಿಶ್ಲೇಷಣೆ ಹಾಗೂ ರಸಗೊಬ್ಬರಗಳ ಲೆಕ್ಕಾಚಾರ ಇತ್ಯಾದಿ ವಿಷಯಗಳನ್ನು ತಿಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇವೆಲ್ಲದರ ಸದುಪಯೋಗ ಪಡಿಸಿಕೊಳ್ಳಲು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ತರಬೇತಿ ಪಡೆದ ತರಬೇತುದಾರರು ತಾವು 15 ದಿನಗಳ ಕಾಲ ಎಲ್ಲ ವಿಷಯಗಳನ್ನು ತಿಳಿದುಕೊಂಡಿದ್ದು, ಅವುಗಳನ್ನು ರೈತರ ಪ್ರಯೋಜನಕ್ಕಾಗಿ ಆಳವಡಿಸಿಕೊಳ್ಳುವುದಾಗಿ ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ವಿಜಯಲಕ್ಷ್ಮೀ ಚವ್ಹಾಣ, ಪಾರ್ವತಿ ಪಾಟೀಲ, ಪ್ರಶಾಂತ ಸಾನಿ, ಕೃಷಿ ಅಧಿಕಾರಿಗಳಾದ ಎಮ್. ಆರ್. ಮೈದರಗಿ, ಗೀತಾ ಬಜಂತ್ರಿ, ಪಾತಿಮಾಬಾನು ಸೇರಿದಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿವರ್ಗ, ಜಿಲ್ಲೆಯ ಪ್ರಾಥಮಿಕ ಕೃಷಿಪತ್ತಿನ ಕಾರ್ಯದರ್ಶಿಗಳು ಭಾಗವಹಿಸಿದ್ದರು.