ಗಡಿಯಲ್ಲಿ ಕನ್ನಡ ಬೆಳವಣಿಗೆ ಕುಂಠಿತಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕರವೇ ಆಕ್ರೋಶ
ಔರಾದ :ಜೂ.30: ಮಹಾರಾಷ್ಟ್ರ, ತೆಲಂಗಾಣ ಗಡಿಗೆ ಅಂಟಿಕೊಂಡ ಔರಾದ ತಾಲೂಕಿನಲ್ಲಿ ಕನ್ನಡ ಮಾಧ್ಯಮದ ಶಾಲೆಗಳ ಆರಂಭಕ್ಕೆ ಪಾಲಕರು ಉತ್ಸಾಹ ತೋರುತ್ತಲಿದ್ದು, ಶಿಕ್ಷಣ ಇಲಾಖೆ ಅವರ ಮನವಿಗೆ ಸ್ಪಂದಿಸಿ ತೂರ್ತಾಗಿ ಕನ್ನಡ ಶಾಲೆಗಳು ತೆರೆಯಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅನೀಲ ದೇವಕತೆ ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಪ್ರಸಕ್ತ ಸಾಲಿಗೆ ಬಸವನವಾಡಿ ತಾಂಡಾ ಶಾಲೆಯಲ್ಲಿ ಕನ್ನಡ ಮಾಧ್ಯಮ ಆರಂಭಿಸುವಂತೆ ತಾಂಡಾ ನಿವಾಸಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಹುಲ್ಯಾಳ, ಡೋಂಗರಗಾಂವ, ಹುಲ್ಯಾಳ ತಾಂಡಾ, ಖಂಡಿಕೇರಿ ಸೇರಿದಂತೆ ಹಲವು ಗ್ರಾಮಗಳಿಂದ ಮನವಿ ಪತ್ರ ನೀಡಿದ್ದು ಬೆಳಕಿಗೆ ಬಂದಿದೆ. ಇದ್ಯಾವುದಕ್ಕೂ ಇಲಾಖೆಯಿಂದ ಇಲ್ಲಿಯವರೆಗೂ ಸ್ಪಂದನೆ ದೊರೆಯದಿರುವುದು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.
ಮಕ್ಕಳಿಗೆ ಕನ್ನಡ ಕಲಿಸಿದರೆ ಕರ್ನಾಟಕ ದಲ್ಲಿ ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕೆ ಅನುಕೂಲವಿದ್ದು, ಇದರಿಂದ ನಮ್ಮ ಮಕ್ಕಳು ಸಂಪೂರ್ಣ ವಂಚಿತರಾಗುತ್ತಿರುವುದಾಗಿ ಬಸವನವಾಡಿ ತಾಂಡಾ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಡೋಂಗರಗಾಂವ ಗ್ರಾಮದಲ್ಲಿ 1-5ನೇ ತರಗತಿ ಕನ್ನಡ ಮಾಧ್ಯಮದ ವಿಭಾಗವಿದ್ದು, 6 ರಿಂದ 8ನೇ ತರಗತಿಗಳು ಉನ್ನತಿಕರಿಸಲು ಗ್ರಾಮಸ್ಥರು ಹಲವು ಬಾರಿ ಬೇಡಿಕೆ ಇಟ್ಟಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಈ ಕೂಡಲೇ ಕನ್ನಡ ಮಾಧ್ಯಮ ಶಾಲೆಗಳು ತೆರೆಯುವಂತೆ ಆಗ್ರಹಿಸುತ್ತ ಒಂದು ವೇಳೆ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಆರಂಭಿಸದಿದ್ದಲ್ಲಿ ಬಿದಿಗಿಳಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸೋನು ರಾಠೋಡ್, ಬಾಲಾಜಿ ಕಾಸಲೆ, ಭೀಮರಾವ ಪವಾರ್, ದೀಲಿಪ ಹಕ್ಕೆ, ಆಕಾಶ ಮೇತ್ರೆ, ರಾಜು ಸೇರಿದಂತೆ ಇನ್ನಿತರರಿದ್ದರು.
ಕನ್ನಡ ಮಾಧ್ಯಮ ಶಾಲೆ ಆರಂಭಿಸಿದರೆ ಮಾತ್ರ ದಾಖಲು ಮಾಡುವುದಾಗಿ ತಾಂಡಾದ 11 ಮಕ್ಕಳ ಪಾಲಕರು ನಿರ್ಧರಿಸಿದ್ದೇವೆ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಕನ್ನಡ ಶಾಲೆ ಆರಂಭಿಸಿ. ಇಲ್ಲವಾದಲ್ಲಿ ಸರ್ಕಾರದ ಈ ಶಾಲೆ ನಮಗೆ ಬೇಕಾಗಿಲ್ಲ ಎನ್ನುತ್ತಾರೆ ಬಸವನವಾಡಿ ತಾಂಡಾ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಭೀಮರಾವ.