ತಾಂತ್ರಿಕ ಹುದ್ದೆಗಳ ವೇತನ ಶ್ರೇಣಿಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ
ಕಲಬುರಗಿ:ಸೆ.26: ಅಭಿವೃದ್ಧಿಪಡಿಸಿರುವ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಹಾಗೂ ಸಿ ವೃಂದದ ನೌಕರರ ಹತ್ತು ಪಟ್ಟು ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದರಿಂದ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ಕೊಡುವಂತೆ ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘದ ನೇತೃತ್ವದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ ಮಾಡಿದರು.
ಪ್ರತಿಭಟನೆಕಾರರು ರಾಜ್ಯದ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್, ಖುರ್ಚಿ, ಅಲ್ಮೇರಾ, ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್‍ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಮುಂತಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು.
ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯುವಂತೆ, ಕೆಸಿಎಸ್‍ಆರ್ ನಿಯಮಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೊ ಹಾಕದಿರಲು ಹಾಗೂ ಮೆಮೊ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಅವರು, ಕರ್ನಾಠಕ ಉಚ್ಛ ನ್ಯಾಯಾಲಯದ ರಿಟ್ ಫಿಟೇಷನ್ ಸಂಖ್ಯೆ 329/23ರ ಅಂತಿಮ ತೀರ್ಪಿಗೆ ಒಳಪಡಿಸಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಕ್ಷಣವೇ ಪದೋನ್ನತಿ ನೀಡುವಂತೆ ಆಗ್ರಹಿಸಿದರು.
ಅಂತರ್ ಜಿಲ್ಲಾ ಪತಿ- ಪತ್ನಿ ಪ್ರಕರಣಗಳ ವರ್ಗಾವಣೆಗೆ ಚಾಲನೆ ನೀಡಿ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ನೀಡುವಂತೆ, ಅಂತರ್ ಜಿಲ್ಲಾ ವರ್ಗಾವಣೆಯ ಕೆಸಿಎಸ್‍ಆರ್ ನಿಯಮ 16ಎ ಉಪಖಂಡ(2)ನ್ನು ಮರು ಸ್ಥಾಪಿಸುವಂತೆ, ಕೆಲವು ವಿಶೇಷ ಚೇತನ, ತೀವ್ರ ಅನಿವಾರ್ಯ ಹಾಗೂ ಆರೋಗ್ಯದ ಸಮಸ್ಯೆ ಇರುವ ಪ್ರಕರಣಗಳ ನಿಯೋಜನೆಯನ್ನು ಕೌನ್ಸಿಲಿಂಗ್ ಮೂಲಕ ನಿಯೋಜನೆ ಆದೇಶ ಹೊರಡಿಸುವಂತೆ ಅವರು ಒತ್ತಾಯಿಸಿದರು.
ರಾಜ್ಯದ ಗ್ರಾಮ ಆಡಳಿತಾಧಿಕಾರಿಗಳು ಪದೋನ್ನತಿಯಲ್ಲಿ ವಂಚಿತರಾಗಿ 30 ವರ್ಷಗಳ ಮೇಲ್ಪಟ್ಟು ಪದೋನ್ನತಿಯನ್ನು ನಿವೃತ್ತಿ ಅಂಚಿನಲ್ಲಿ ಪಡೆಯುತ್ತಿರುವುದರಿಂದ ರಾಜ್ಯದಲ್ಲಿನ 1196 ಗ್ರೇಡ್ -1 ಗ್ರಾಮ ಪಂಚಾಯಿತಿ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿಯನ್ನಾಗಿ ಮೇಲ್ದರ್ಜೆಗೇರಿಸಿ ರಾಜಸ್ವ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸಿ ಮೇಲ್ದರ್ಜೆಗೇರಿಸಿ ಪದೋನ್ನತಿಯನ್ನು ನೀಡುವಂತೆ ಅವರು ಆಗ್ರಹಿಸಿದರು.
ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲ ಬಗೆಯ ವರ್ಚುವೆಲ್ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸುವಂತೆ, ಆಹಾರ ಇಲಾಖೆಯ ಕೆಲಸಗಳನ್ನು ಕಂದಾಯ ಇಲಾಖೆಗೆ ನಿರ್ವಹಿಸಲು ಆದೇಶಿಸುತ್ತಿರುವುದರಿಂದ ಈ ಹಿಂದಿನಂತೆ ಆಹಾರ ಇಲಾಖೆಯ ಆಹಾರ ನಿರೀಕ್ಷಕರ ಹುದ್ದೆಗೆ ಪದೋನ್ನತಿಯನ್ನು ನೀಡುವಂತೆ, ಕಂದಾಯ ಇಲಾಖೆಯ ಮೂರು ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿಯನ್ನು ನೀಡುವಂತೆ ಅವರು ಒತ್ತಾಯಿಸಿದರು.
ಮಾತೃ ಇಲಾಖೆಯ ಕೆಲಸಗಳೊಂದಿಗೆ ಸರ್ಕಾರದ ಆದೇಶದಂತೆ ಇತರೆ ಇಲಾಖೆಗಳ ಹಲವಾರು ಕೆಲಸಗಳನ್ನು ನಿರ್ವಹಿಸುವ ಹಾಗೂ ಚುನಾವಣೆ, ಅತಿವೃಷ್ಟಿ, ಅನಾವೃಷ್ಟಿ, ಇನ್ನಿತರ ಗುರುತರವಾದ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸುತ್ತಿದ್ದು, ದಿನನಿತ್ಯ ಸಾರ್ವಜನಿಕ ವಲಯದಲ್ಲಿ ನೂರಾರು ಸೇವೆಗಳನ್ನು ನೀಡುವಾಗ ಮಾರಣಾಂತಿಕ ಹಲ್ಲೆ, ಕೊಲೆ ಪ್ರಕರಣಗಳು ಈಗಾಗಲೇ ನಿರಂತರವಾಗಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆಯಲ್ಲಿರುವಂತೆ 3000ರೂ.ಗಳ ಆಪತ್ತಿನ ಭತ್ಯೆಯನ್ನು ನೀಡುವಂತೆ ಅವರು ಆಗ್ರಹಿಸಿದರು.
ಆಯುಕ್ತಾಲಯದ ಅಡಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಜೇಷ್ಠತೆಯನ್ನು ರಾಜ್ಯ ಮಟ್ಟದ ಜೇಷ್ಠತೆಯನ್ನಾಗಿ ಪರಿಗಣಿಸುವಂತೆ, ಪ್ರಯಾಣ ಭತ್ಯೆ ದರವನ್ನು 500ರೂ.ಗಳಿಂದ 3000ರೂ.ಗಳಿಗೆ ಹೆಚ್ಚುವರಿ ಮಾಡುವಂತೆ, ಮನೆ ಹಾನಿ ಪ್ರಕರಣಗಳ ಜವಾಬ್ದಾರಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಂದ ಕೈಬಿಡುವಂತೆ, ವಿಶೇಷ ಚೇತನ ಹಾಗೂ ಕೆಲವು ಅನಾರೋಗ್ಯ ಪ್ರಕರಣಗಳನ್ನು ಹೊರತುಪಡಿಸಿ ತಾಲ್ಲೂಕು ಕಚೇರಿ, ಉಪ ವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯೋಜನೆ ಮೇಲೆ ಕೆಲಸ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರ ಮೂಲ ವೃತ್ತಗಳಿಗೆ ಕರ್ತವ್ಯ ನಿರ್ವಹಿಸಲು ಆದೇಶಿಸುವಂತೆ ಅವರು ಒತ್ತಾಯಿಸಿದರು.
50 ವರ್ಷಗಳ ಹಿಂದಿನ ಕಾಲದ ಕಚೇರಿಯ ಎಲ್ಲ ನೌಕರರ ಹುದ್ದೆಗಳನ್ನು ಹಾಗೂ ಕ್ಷೇತ್ರ ಮಟ್ಟದಲ್ಲಿನ ಗ್ರಾಮ ಆಡಳಿತ ಅಧಿಕಾರಿಗಳ ವೃತ್ತಗಳನ್ನು, ಹೋಬಳಿಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಪರಿಷ್ಕರಿಸಿ ಪುನರ್ ವಿಂಗಡಣೆ ಮಾಡಿ ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವಂತೆ, ಗ್ರಾಮ ಆಡಳಿತ ಅಧಿಕಾರಿಗಳ ಜಾಬ್ ಕಾರ್ಡ್ ನಿಗದಿಪಡಿಸುವಂತೆ, ಸ್ಥಾನಿಕ ಬೆಳೆಗಳಿಗೆ ಅನುಗುಣವಾಗಿ ಬೆಳೆ ಕಟಾವು ಸಮೀಕ್ಷೆಯ ಪ್ರಯೋಗವನ್ನು ವೃತ್ತಕ್ಕೆ ಒಂದು ಬೆಳೆ ಕಟಾವು ಪ್ರಯೋಗದಂತೆ ಮಾತ್ರ ನಿಗದಿಪಡಿಸುವಂತೆ ಅವರು ಅಗ್ರಹಿಸಿದರು.
ಸಂಘ ಅಧ್ಯಕ್ಷ ಸೈಯದ್ ಜುಬೇರ್ ಅಲಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಕುಮಾರ್ ಮೆಣಸಿನಕಾಯಿ, ಖಜಾಂಚಿ ರೇವಣಸಿದ್ದಪ್ಪ ಚಂದನಕೇರಿ, ಮಾಜಿ ಅಧ್ಯಕ್ಷ ಗುರುಮೂರ್ತಯ್ಯ, ರಾಜ್ಯ ಸಂಘ ಸಂಚಾಲಕ ರಾಜು, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಕೆ. ಕಿರಣಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.