ಕನ್ನಡ ಭಾಷೆಯನ್ನು ಪ್ರೀತಿಸಿ, ಗೌರವಿಸಿ: ಸಿಂಪಿ
ಕಲಬುರಗಿ,ಅ.5-ಕನ್ನಡ ಭಾಷೆ, ನಾಡು, ನುಡಿಯನ್ನು ಪ್ರತಿಯೊಬ್ಬ ಕನ್ನಡಿಗರು ಪ್ರೀತಿಸಬೇಕು ಮತ್ತು ಗೌರವಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ವೀರಭದ್ರ ಸಿಂಪಿ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಸತ್ಯಂ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಸತ್ಯಂ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರೂಜಿ ಪದವಿ ಮಹಾ ವಿದ್ಯಾಲಯದ ಅಧ್ಯಕ್ಷ ಕಲ್ಯಾಣರಾವ ಶೀಲವಂತ ಅವರು ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಕೊಡಬೇಕು. ಮೊಬೈಲ್ ಹಿಡಿದು ಸಮಯ ಹಾಳು ಮಾಡಿಕೊಳ್ಳಬೇಡಿ ಅದನ್ನು ಬಿಟ್ಟು ಓದಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ಸತತ ಅಭ್ಯಾಸದ ಕಡೆ ಗಮನ ಕೊಡಬೇಕಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಚಿ.ಸಿ. ನಿಂಗಣ್ಣ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರು ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್.ನಿರಗುಡಿಯವರು ಅತಿಥಿಗಳಿಗೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕನ್ನಡ ಪುಸ್ತಕ ಪ್ರಾಧಿಕಾರ ನಾಡಿನಾದ್ಯಂತ ಕನ್ನಡವನ್ನು ಪಸರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಅರಿವು ಮೂಡಿಸುವ ದೊಡ್ಡ ಜವಾಬ್ದಾರಿ ಹೊಂದಿದೆ ಎಂದು ಹೇಳಿದರು.
ಕನ್ನಡ ರಸಪ್ರಶ್ನೆ ಸ್ಪರ್ಧೆಯಲ್ಲಿ ಸತ್ಯಂ ಪಿಯು ಕಾಲೇಜಿನ ಅಂಬಿಕಾ ಶರಣಪ್ಪ ಪ್ರಥಮ, ಆರ್‍ಜೆ ಪಿಯು ಕಾಲೇಜಿನ ಧೂಳಪ್ಪ ಪೂಜಾರಿ, ಎಸ್‍ಎಸ್ ತೆಗನೂರು ಕಾಲೇಜಿನ ಅಪೂರ್ವ ಆನಂದ್ ಕುಮಾರ್, ಆಚಾರ್ಯ ಪಿಯು ಕಾಲೇಜಿನ ಭಾಗ್ಯಶ್ರೀ ಮಲ್ಲಿಕಾರ್ಜುನ್ ದ್ವಿತೀಯ ಬಹುಮಾನ, ಎಸ್‍ಬಿಆರ್ ಕಾಲೇಜಿನ ನೀಲಮ್ಮ ವೀರಣ್ಣ ಹಾಗೂ ಚೆನ್ನಕೇಶವ ಮಾಳಪ್ಪ ಅವರನ್ನು ತೃತೀಯ ಬಹುಮಾನ ಪಡೆದರು. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಗರದ ಅನೇಕ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಉಪನ್ಯಾಸಕ ರಮೇಶ್ ಬಡಿಗೇರ್ ಕಾರ್ಯಕ್ರಮ ನಿರೂಪಣೆ ಮಾಡಿದರು.