ಬಿ.ಎಸ್.ಎಸ್.ಕೆ ಪುನರಾರಂಭಿಸದಿದ್ದರೆ ಕಾನೂನು ಹೋರಾಟ: ಸಿಂದೋಲ ವಕೀಲ ಎಚ್ಚರಿಕೆ
ಬೀದರ್: ಅ.5:ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಇಲ್ಲಿಯ ಅನ್ನದಾತರ ಹಾಗೂ ಕಾರ್ಖಾನೆ ನಂಬಿಕೊಂಡು ಬದುಕು ಸಾಗಿಸದೇ ಕಂಗಾಲಾಗಿರುವ ಅಲ್ಲಿಯ ಕಾರ್ಮಿಕರ ಹಿತದೃಷ್ಟಿಯಿಂದ ಇದನ್ನು ಪುನರಾರಂಭಿಸಲು ಇಲ್ಲಿಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮುಂದೆ ಬರಬೇಕೆಂದು ಬಿ.ಎಸ್.ಎಸ್.ಕೆ ಬಚಾವೊ ಆಂದೋಲನ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಹನುಮಂತರಾಯ ಸಿಂದೋಲ ಆಗ್ರಹಿಸಿದ್ದಾರೆ.
ಶನಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಬಿ.ಎಸ್.ಎಸ್.ಕೆ 1961-62ರಲ್ಲಿ ಬಿ.ಎಸ್.ಎಸ್.ಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಜರುಗಿತು. ನಂತರ 1969-70ರಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭವಾಯಿತು. ಮೊದಲು ಕೇವಲ ಪ್ರತಿ ಹಂಗಾಮಿಗೆ 1250 ಟನ್ ಕಬ್ಬು ನುರಿಸುವ ಕಾರ್ಯ ಆರಂಭವಾಗಿ ನಂತರ ಅದು 3500ಕ್ಕೆ ತಲುಪಿತು. ಇಂಥ ಸಾಮರ್ಥವುಳ್ಳ ಕಾರ್ಖಾನೆಯನ್ನು ಈಗಿನ ರಾಜಕೀಯ ದುರಿಣರೆ ಹಾಳು ಮಾಡಿದಂತಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ, ಮಹಾತ್ಮಾ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ, ಭಾಲ್ಕೇಶ್ವರ ಸೂಗರ್ಸ್ ಲಿಮಿಟೆಡ್ ಹೀಗೆ ಖಾಸಗಿ ಕಾರ್ಖಾನೆಗಳು ತಲೆ ಎತ್ತಿರುವುದರಿಂದ ಹಿಂದೆ ಬಿ.ರಸ್.ಎಸ್.ಕೆಗೆ ಅಧ್ಯಕ್ಷರಾದವರೇ ಸ್ವತಃ ಕಾರ್ಖಾನೆ ತೆರೆದಿರುವ ಕಾರಣ ಬಿ.ಎಸ್.ಎಸ್.ಕೆ ಹಾಳಾಗಲು ಮುಖ್ಯ ಕಾರಣವಾಗಿದೆ. ಡಿ.ಸಿ.ಸಿ ಬ್ಯಾಂಕ್ ಬಿ.ಎಸ್.ಎಸ್.ಕೆ ಮೇಲೆ 300 ಕೋಟಿ ಸಾಲದ ಶೂಲ ಹೋರಿಸಿದ್ದರಿಂದ ಅದು ಬಂದ್ ಆಗಲು ಕಾರಣವಾಗಿದೆ ಎಂದು ಸ್ವತಃ ಹಾಲಿ ಜಿಲ್ಲಾ ಉಸ್ತುವಾರಿ ಸಚಿವರೆ ಹೇಳುತ್ತಾರೆ. ನಿಮಗೆ ರೈತರ ಬಗ್ಗೆ ನಿಜವಾದ ಕನಿಕರ ಇದ್ದರೆ ನಿಮ್ಮ ಸಹೋದರರೆ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಸರ್ಕಾರದಿಂದ ಆಗಲಿ ಅಥವಾ ಡಿ.ಸಿ.ಸಿ ಬ್ಯಾಂಕ್‍ನಿಂದ ಕಾಲಾವಕಶ ಕೊಡಿಸಿ ಕಾರ್ಖಾನೆ ಪುನರಾರಂಭಕ್ಕೆ ಮಹತ್ವ ನೀಡಿ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ಎನ್.ಎಸ್.ಎಸ್.ಕೆ, ಎಮ್.ಜಿ.ಎಸ್.ಎಸ್.ಕೆ, ಕಾರ್ಖಾನೆಗಳ ಮೇಲೆ ಡಿ.ಸಿ.ಸಿ ಬ್ಯಾಂಕಿನ ಸಾಲ ಇದ್ದರೂ ಅವು ನಡೆಯುತ್ತಿವೆ. ಈ ಕಾರ್ಖಾನೆ ಏಕೆ ನಡೆಯುದಿಲ್ಲ. ಮಂಡ್ಯಾದಲ್ಲಿ ಮೈ ಸೂಗರ್ಸ್ ಲಿಮಿಟೆಡ್ ಕಾರ್ಖಾನೆ ಬಂದ್ ಆದರೆ ಸರ್ಕಾರ ಸ್ವತಃ ಕಾಳಜಿ ವಹಿಸಿ ಅದನ್ನು ಪುನರಾರಂಭಿಸಿದೆ. ಆದರೆ ಬಿ.ಎಸ್.ಎಸ್.ಕೆಗೆ ಏಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ? ಎಂದು ಪ್ರಶ್ನೆ ಮಾಡಿದರು.
ಜಿಲ್ಲೆಯಲ್ಲಿ ಇಬ್ಬರು ರಾಜ್ಯ ಸರ್ಕಾರದ ಮಂತ್ರಿಗಳಿದ್ದಿರಿ. ಇಲ್ಲಿ ನಿಮ್ಮದೆ ಪಕ್ಷದ ಸರ್ಕಾರವಿದೆ. ಹೀಗಿರುವಾಗ ಏಕೆ ಇದನ್ನು ಪ್ರಾರಂಭಿಸಲು ಮುತುವರ್ಜಿ ತೋರುತ್ತಿಲ್ಲ? ಈ ಕಾರ್ಖಾನೆ ಆರಂಭವಾದರೆ ನಿಮ್ಮ ಸ್ವಾಯುಕ್ತದ ಕಾರ್ಖಾನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಭವವೇ? ಎಂದು ಪ್ರಶ್ನೆ ಮಾಡಿರುವ ಅವರು, ಅನ್ನದಾತರಿಗೆ ಅನ್ನ ನೀಡುವ ಈ ಕಾರ್ಖಾನೆ ಜಾರಿಯಾಗದಿದ್ದರೆ ಕಾನೂನು ಹೋರಾಟ ಅನಿವಾರ್ಯವಾಗಲಿದೆ ಎಂದು ಸಿಂದೋಲ ವಕೀಲರು ಹೇಳಿದರು.
ಸಮಿತಿಯ ಸದಸ್ಯರಾದ ಅನಂತರೆಡ್ಡಿ ಮಾತನಾಡಿ, 172 ಎಕರೆ 10 ಗುಂಟೆ ಜಮಿನಿನಲ್ಲಿ ಇಷ್ಟು ವಿಸ್ತಾರವಾದ ಕಾರ್ಖಾನೆ ಬಂದ್ ಆಗಲು ಇಲ್ಲಿಯ ಎಲ್ಲ ಜನಪ್ರತಿನಿಧಿಗಳು ಜವಾಬ್ದಾರರಾಗಿದ್ದಾರೆ. 25 ಸಾವಿರ ಶೇರ್ ಸದಸ್ಯರು ಹೊಂದಿರುವ ಈ ಕಾರ್ಖಾನೆಯ ಗೋಳು ಕೇಳುವರ್ಯಾರು? ಹಲವಾರು ಗ್ಯಾರಂಟಿ ಆರಂಭಿಸಿ ಹಣ ಹಾಳು ಮಾಡುವ ಬದಲು ಅನ್ನದಾತರ ಹಿತ ಬಯಸಿ ಈ ಕಾರ್ಖಾನೆ ಆರಂಭಿಸಿ ಬೀದಿಗೆ ಬಂದಿರುವ ಸಾವಿರಾರು ಅಲ್ಲಿಯ ಕಾರ್ಖಾನೆ ಕಾರ್ಮಿಕರ ಕಣ್ಣೋರೆಸುವ ಕೆಲಸ ಮಾಡುವಂತೆ ಕರೆ ನೀಡಿದರು. ಸದಸ್ಯರಾದ ಸಂಘಟಕರಾದ ಭಗವಾನ ನೌಬಾದಕರ್, ಗಣಪತಿ ಶಂಭು ಮಾತನಾಡಿದರು.
ಸಮಿತಿಯ ಇತರೆ ಸದಸ್ಯರಾದ ಘಾಳೆಪ್ಪ ಸಾರೋಳಿ, ಸಿದ್ದಪ್ಪ ಪೋಲಿಸ್ ಪಾಟೀಲ, ನಾಗಶೆಟ್ಟೆಪ್ಪ ಹಚ್ಚೆ, ಗುಂಡಪ್ಪ ಬುಧೇರಾ, ಬಜರಂಗ ಖಾಶೆಂಪುರ, ಸೂರ್ಯಕಾಂತ ಪಾಟೀಲ ಗೂನಳ್ಳಿ, ಜಾನಸನ್ ಘೋಡೆ, ಚನ್ನಮಲ್ಲಪ್ಪ ಹಜ್ಜರಗಿ, ಅಮರ ಕರನಳ್ಳಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.