ಚಂಡಮಾರುತ: ಟೀಮ್ ಇಂಡಿಯಾ ವಾಪಸ್ ವಿಳಂಬ
ಬಾರ್ಬೊಡೊಸ್.ಜು.೧- ಹರಿಕೇನ್ ಬೆರಿಲ್ ಚಂಡಮಾರುತ ಹಿನ್ನೆಲೆಯಲ್ಲಿ ಟಿ೨೦ ಚಾಂಪಿಯನ್ ಟೀಮ್ ಇಂಡಿಯಾ ಬಾರ್ಬಡೋಸ್‌ನಲ್ಲಿ ಸಿಲುಕಿದ್ದು ಭಾರತಕ್ಕೆ ಬರುವುದು ತಡವಾಗಲಿದೆ.
ಮೊನ್ನೆ ರೋಹಿತ್ ನೇತೃತ್ವದ ಟಿ೨೦ ವಿಶ್ವಕಪ್ ಫೈನಲ್‌ನಲ್ಲಿ ಗೆದ್ದು ಬೀಗಿತ್ತು. ಇದೀಗ ಬೆರಿಲ್ ದ್ವೀಪದ ಸಮೀಪ ಚಂಡಮಾರುತ ತಲುಪುತ್ತಿರುವ ಹಿನ್ನೆಲೆಯಲ್ಲಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿನ ಹಿಲ್ಟನ್ ಹೋಟೆಲ್‌ನಲ್ಲಿ ಟೀಮ್‌ಇಂಡಿಯಾದ ಆಟಗಾರರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತ ತಂಡ ಭಾರತೀಯ ಕಾಲಮಾನ ನಿನ್ನೆ ರಾತ್ರಿ ೮:೩೦ ಬಾರ್ಬಡೋಸ್‌ನಿಂದ ಹೊರಡಬೇಕಿತ್ತು, ಆದರೆ ಈಗ ಚಂಡಮಾರುತದಿಂದಾಗಿ ವಿಳಂಬವಾಗಿರುತ್ತದೆ. ಭಾರತೀಯ ಆಟಗಾರರು ಸೋಮವಾರ ನ್ಯೂಯಾರ್ಕ್‌ಗೆ ತೆರಳಬೇಕಿತ್ತು. ನಂತರ ದುಬೈಗೆ ಸಂಪರ್ಕ ವಿಮಾನದ ಮೂಲಕ ಭಾರತಕ್ಕೆ ಬರಬೇಕಿತ್ತು. ಗ್ರಾಂಟ್ಲಿ ಆಡಮ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಎಂದು ಬಾರ್ಬಡೋಸ್ ಪ್ರಧಾನ ಮಂತ್ರಿ ಮಿಯಾ ಮೊಟ್ಲಿ ಘೋಷಿಸಿದ್ದಾರೆ. ಯಾವುದೇ ವಿಮಾನಗಳು ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಆಗುವುದನ್ನು ತಡೆಯುತ್ತದೆ. ಆದಾಗ್ಯೂ, ಅವರು ಆ ವಿಮಾನವನ್ನು ಹತ್ತಬಹುದೇ ಅಥವಾ ಇಲ್ಲವೇ ಎಂಬುದು ಇನ್ನೂ ತಿಳಿದಿಲ್ಲ, ಆದರೆ ಅವರು ಕೆಟ್ಟ ಹವಾಮಾನದಲ್ಲಿ ಸಿಕ್ಕಿಬಿದ್ದರೆ, ಅವರು ಬಾರ್ಬಡೋಸ್‌ನಲಲಿ ೩೬ ರಿಂದ ೪೮ ಗಂಟೆಗಳ ಕಾಲ ಸಿಲುಕಿಕೊಳ್ಳಬೇಕಾಗಬಹುದು ಎಂದು ಹೇಳಲಾಗುತ್ತಿದೆ.
೧೭ ವರ್ಷಗಳ ಬಳಿಕ ಟಿ೨೦ ಚಾಂಪಿಯನ್ ಆಗಿರುವುದರಿಂದ ರೋಹಿತ್ ಪಡೆಗೆ ಕ್ರಿಕೆಟ್ ಅಭಿಮಾನಿಗಳು ಮತ್ತು ಬಿಸಿಸಿಐ ಅದ್ಧೂರಿ ಸ್ವಾಗತ ನೀಡಲು ಕಾತರದಿಂದ ಕಾಯಲಾಗುತ್ತಿದೆ.