ಭಾರತ-ಆಸೀಸ್ ಕದನಕ್ಕೆ ಮಳೆ ಭೀತಿ
ಸೇಂಟ್ ಲೂಸಿಯಾ.ಜೂ. ೨೪- ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ೨೦ ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ರೋಚಕ ಕಾದಾಟಕ್ಕೆ ಮಳೆ ಭೀತಿ ಎದುರಾಗಿದೆ. .
ಹವಾಮಾನ ವರದಿಗಳ ಪ್ರಕಾರ, ಪಂದ್ಯದ ವೇಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಈಗಾಗಲೇ ಭಾನುವಾರ ಸೇಂಟ್ ಲೂಸಿಯಾ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಇಂದಿನ ಪಂದ್ಯಕ್ಕೂ ವರುಣ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ.
ಟಿ೨೦ ವಿಶ್ವಕಪ್ ಟೂರ್ನಿಯ ಸೂಪರ್-೮ ಪಂದ್ಯಗಳಿಗೆ ಯಾವುದೇ ಮೀಸಲು ದಿನವಿಲ್ಲ. ಹೀಗಾಗಿ, ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ಹಂಚಿಕೆ ಮಾಡಲಾಗುತ್ತದೆ.ಇದರಿಂದಾಗಿ ಈಗಾಗಲೇ ೪ ಅಂಕ ಹೊಂದಿರುವ ಭಾರತವು ಸತತ ಎರಡನೇ ಬಾರಿಗೆ ಟಿ೨೦ ವಿಶ್ವಕಪ್ ಸೆಮಿಫೈನಲ್ ತಲುಪಲಿದೆ.
ಮತ್ತೊಂದೆಡೆ, ಪಂದ್ಯ ರದ್ದಾದರೆ ಆಸ್ಟ್ರೇಲಿಯಾವು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ. ಆಸೀಸ್ ತಂಡವು ಬಳಿಕ ನಡೆಯಲಿರುವ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನಡುವಿನ ಕೊನೆಯ ಸೂಪರ್-೮ ಪಂದ್ಯದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಈ ಪಂದ್ಯದಲ್ಲಿ ಬಾಂಗ್ಲಾ ಗೆಲುವಿಗಾಗಿ ಕಾಂಗರೂ ಪಡೆ ಪ್ರಾರ್ಥಿಸಬೇಕಾಗಲಿದೆ.
ಒಂದು ವೇಳೆ ಭಾರತ ತಂಡ ಆಸೀಸ್ ವಿರುದ್ಧ ಸೋತು, ಅತ್ತ ಅಫ್ಘಾನಿಸ್ತಾನವೂ ಬಾಂಗ್ಲಾವನ್ನು ಮಣಿಸಿದರೆ, ಮತ್ತೆ ರನ್‌ರೇಟ್ ಲೆಕ್ಕಾಚಾರ ಶುರುವಾಗಲಿದೆ. ಯಾಕೆಂದರೆ, ಈ ಮೂರು ತಂಡಗಳು ತಲಾ ೪ ಅಂಕ ಪಡೆಯಲಿವೆ. ಇದರಿಂದಾಗಿ ರನ್ ದರದಲ್ಲಿ ಅಗ್ರಸ್ಥಾನದಲ್ಲಿದ್ದವರು ಸೆಮೀಸ್‌ಗೆ ಎಂಟ್ರಿ ಕೊಡಲಿದ್ದಾರೆ.
ಅಫ್ಘಾನಿಸ್ತಾನ ಸೋತರೆ ಆಸೀಸ್‌ಗೆ ಸೆಮೀಸ್ ಹಾದಿ ಸರಳವಾಗಲಿದೆ. ಒಂದು ವೇಳೆ ಅಫ್ಘಾನಿಸ್ತಾನ ಗೆದ್ದರೆ, ೪ ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಲಗ್ಗೆ ಇಡಲಿದೆ. ಈ ಪಂದ್ಯವೂ ಕೂಡ ಮಳೆಯಿಂದ ರದ್ದುಗೊಂಡರೆ, ತಲಾ ಮೂರು ಅಂಕಗಳಿದ್ದರೂ ಕೂಡ ರನ್‌ರೇಟ್ ಆಧಾರದಲ್ಲಿ ಅಫ್ಘನ್ನರನ್ನು ಹಿಂದಿಕ್ಕಿ ಆಸ್ಟ್ರೇಲಿಯನ್ನರು ಸೆಮಿಫೈನಲ್‌ಗೆ ತಲುಪಲಿದೆ.