ನಾಟಿ ಸ್ಟೈಲ್ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು
*ಚಿಕನ್ – ೧/೨ ಕೆ.ಜಿ
*ಅಕ್ಕಿ – ೧/೨ ಕೆ.ಜಿ
*ಅರಿಶಿಣ ಪುಡಿ – ೧/೪ ಚಮಚ
*ಎಣ್ಣೆ – ೧೦೦ ಮಿ.ಲೀ
*ತುಪ್ಪ – ೫೦ ಮಿ.ಲೀ
*ಅನಾನಸ್ ಬೀಜ – ೨
*ಏಲಕ್ಕಿ – ೩
*ಚಕ್ಕೆ – ೩
*ಲವಂಗ – ೩
*ಈರುಳ್ಳಿ – ೨
*ಟೊಮೆಟೋ ಪೇಸ್ಟ್ – ೩ ಚಮಚ
*ಹಸಿಮೆಣಸಿನಕಾಯಿ ಪೇಸ್ಟ್ – ೧ ಚಮಚ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೨ ಚಮಚ
*ಸೊಂಪು – ೧/೨ ಚಮಚ
*ಕೊತ್ತಂಬರಿ ಸೊಪ್ಪು – ೧/೪ ಕಟ್ಟು
*ಪುದೀನ ಸೊಪ್ಪು – ೧/೪ ಕಟ್ಟು
*ಮೆಂತ್ಯ ಸೊಪ್ಪು – ೧/೪ ಕಟ್ಟು
*ಗರಂ ಮಸಾಲ – ೧ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
ಅಕ್ಕಿಯನ್ನು ತೊಳೆದು ನೀರಿನಲ್ಲಿ ೧೦ ನಿಮಿಷ ನೆನಿಸಿಕೊಂಡು ನೀರನ್ನು ಬಸಿದುಕೊಳ್ಳಿ. ಸೊಪ್ಪಿನ ಎಲೆ ಹಾಗೂ ಕಡ್ಡಿಗಳನ್ನು ಬೇರ್ಪಡಿಸಿ, ಸೊಪ್ಪನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ ಮತ್ತು ಕಡ್ಡಿಯನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಕುಕ್ಕರ್ ಅಥವಾ ಅಗಲವಾದ ಬಾಯಿ ಇರುವ ಪಾತ್ರೆಯನ್ನು ಸ್ಟವ್ ಮೇಲೆ ಇಟ್ಟು ಎಣ್ಣೆ ಹಾಗೂ ತುಪ್ಪವನ್ನು ಸಣ್ಣ ಉರಿಯಲ್ಲಿ ಬಿಸಿಮಾಡಿಕೊಳ್ಳಿ. ಎಣ್ಣೆ ಕಾದ ನಂತರ ಸ್ಟಾರ್ ಅನಾನಸ್ ಹೂವು, ಏಲಕ್ಕಿ, ಚಕ್ಕೆ, ಲವಂಗ, ಸೊಂಪು ಹಾಕಿ ಫ್ರೈ ಮಾಡಿದ ನಂತರ ಹೆಚ್ಚಿಕೊಂಡ ಈರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ನಂತರ ಹೆಚ್ಚಿಕೊಂಡ ಸೊಪ್ಪು, ರುಬ್ಬಿದ ಹಸಿ ಮೆಣಸಿನಕಾಯಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಂತರ ರುಬ್ಬಿ ಇಟ್ಟಿರುವ ಸೊಪ್ಪಿನ ಪೇಸ್ಟ್‌ನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಅರಿಶಿಣ ಪುಡಿ, ಗರಂ ಮಸಾಲ, ರುಬ್ಬಿದ ಟೊಮೆಟೋ ಪೇಸ್ಟ್ ಹಾಕಿ ಫ್ರೈ ಮಾಡಿ. ಈ ಎಲ್ಲಾ ಮಸಾಲೆಗಳನ್ನು ಫ್ರೈ ಆದ ನಂತರ ಅಕ್ಕಿಯ ಅಳತೆಗೆ ತಕ್ಕಂತೆ ನೀರು ಹಾಕಿ ಕುದಿಯಲು ಬಿಡಿ. ಕುದ್ದ ನಂತರ ರುಚಿಗೆ ತಕ್ಕಂತೆ ಉಪ್ಪು, ಚಿಕನ್ ತುಂಡುಗಳನ್ನು ಸೇರಿಸಿ ೩ ನಿಮಿಷ ಬೇಯಿಸಿ ನೆನೆಸಿಟ್ಟಿರುವ ಅಕ್ಕಿಯನ್ನು ಹಾಕಿ. ಅಕ್ಕಿಯನ್ನು ಹಾಕಿದ ನಂತರ ನೀರಿನ ಅಂಶ ೯೦% ಕಡಿಮೆಯಾಗುವವರೆಗೂ ತಿರುಗಿಸುತ್ತಿರಬೇಕು, ಅಕ್ಕಿಯು ೮೦% ಬೆಂದ ನಂತರ ಕುಕ್ಕರ್ ಮುಚ್ಚಳವನ್ನು ಮುಚ್ಚಿ ೧ ವಿಷಲ್ ಕೂಗಿಸಿ ಅಥವಾ ಪಾತ್ರೆಯ ಮುಚ್ಚಳವನ್ನು ೧೦ ನಿಮಿಷ ಅತಿ ಸಣ್ಣ ಉರಿಯಲ್ಲಿ ಇಡಿ. ಆನಂತರ ಕುಕ್ಕರ್ ಮುಚ್ಚಳವನ್ನು ತೆಗೆದರೆ ರುಚಿಯಾದ ಗ್ರೀನ್ ಚಿಕನ್ ಬಿರಿಯಾನಿ ಸವಿಯಲು ತಯಾರಾಗಿರುತ್ತದೆ.