ಕೊಲ್ಲಾಪುರಿ ಚಿಕನ್ ಗ್ರೇವಿ
ಬೇಕಾಗುವ ಸಾಮಗ್ರಿಗಳು
*ಚಿಕನ್ ಪೀಸ್ – ೧/೪ ಕೆ.ಜಿ
*ಬ್ಯಾಡಗಿ ಮೆಣಸಿನಕಾಯಿ – ೬
*ಧನಿಯಾ – ೧/೨ ಚಮಚ
*ಬಿಳಿ ಎಳ್ಳು – ೧ ಚಮಚ
*ಗಸಗಸೆ – ೧ ಚಮಚ
*ಜೀರಿಗೆ – ೧/೨ ಚಮಚ
*ಗರಂ ಮಸಾಲ – ೧/೨ ಚಮಚ
*ಈರುಳ್ಳಿ – ೨
*ಟೊಮೆಟೋ – ೨
*ಕೊಬ್ಬರಿ ತುರಿ – ೫೦ ಗ್ರಾಂ
*ಶುಂಠಿ,ಬೆಳ್ಳುಳ್ಳಿ ಪೇಸ್ಟ್ – ೧/೨ ಚಮಚ
*ಮೊಸರು – ೨ ಚಮಚ
*ಅರಿಶಿಣ – ೧/೨ ಚಮಚ
*ಕಾಳು ಮೆಣಸು – ೧/೪ ಚಮಚ
*ಚಕ್ಕೆ – ೪ ಪೀಸ್
*ಏಲಕ್ಕಿ – ೨
*ಲವಂಗ – ೨
*ಜಾಪತ್ರೆ – ೧ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೧೫೦ ಮಿ.ಲೀ
ಮಾಡುವ ವಿಧಾನ :
ಪಾತ್ರೆಗೆ ಚಿಕನ್ ಹಾಕಿ, ಮೊಸರು, ಅರಿಶಿಣ, ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಪ್ಯಾನ್‌ಗೆ ಗಸಗಸೆ, ಬಿಳಿ ಎಳ್ಳು, ಕೊಬ್ಬರಿ ತುರಿ ಹಾಕಿ ಹುರಿಯಿರಿ. ಇನ್ನೊಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಚಕ್ಕೆ, ಲವಂಗ, ಏಲಕ್ಕಿ, ಜಾಪತ್ರೆ ಹೂ, ಹಾಕಿ ಫ್ರೈ ಮಾಡಿ. ಜೀರಿಗೆ, ಕಾಳು ಮೆಣಸು, ಧನಿಯಾ, ಬ್ಯಾಡಗಿ ಮೆಣಸಿನಕಾಯಿ, ಈರುಳ್ಳಿಯನ್ನು ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಟೊಮೆಟೋವನ್ನು ಹಾಕಿ ಕೈಯಾಡಿಸಿ. ಗಸಗಸೆ, ಬಿಳಿಎಳ್ಳು, ಕೊಬ್ಬರಿಯೊಂದಿಗೆ ಹುರಿದುಕೊಂಡಿರುವುದನ್ನೆಲ್ಲ ಸೇರಿಸಿ ರುಬ್ಬಿಕೊಳ್ಳಿ. ಬಾಣಲಿಗೆ ಸ್ವಲ್ಪ ಎಣ್ಣೆಯೊಂದಿಗೆ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹದವಾಗಿ ಹುರಿಯಿರಿ. ಪಾತ್ರೆಯಲ್ಲಿರುವ ಚಿಕನ್ ಪೀಸ್‌ಗಳನ್ನು ಬಾಣಲಿಗೆ ಹಾಕಿ ಎಲ್ಲವೂ ಸರಿಯಾಗಿ ಬೆರೆತುಕೊಳ್ಳುವಂತೆ ಕಲಸಿ. ನಂತರ ಸ್ವಲ್ಪ ಉಪ್ಪು ನೀರು ಹಾಕಿ ಮುಚ್ಚಳ ಮುಚ್ಚಿ ಸ್ವಲ್ಪ ಸಮಯ ಬೇಯಿಸಿದರೆ, ಬಾಯಲ್ಲಿ ನೀರೂರಿಸುವ ಬಿಸಿಬಿಸಿಯಾದ ಕೊಲ್ಲಾಪುರಿ ಚಿಕನ್ ಗ್ರೇವಿ ಸಿದ್ಧ.