ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದು ಉಪ್ಪು ಉಳಿ ಖಾರ ಇಲ್ಲದ, ಯಾರದ್ದೋ ಒತ್ತಡದಿಂದ ಓದಿದ ನೀರಸ ಬಜೆಟ್ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.ಬಜೆಟ್ ಬಗ್ಗೆ ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇವಲ ಅಂಕಿ ಅಂಶಗಳನ್ನು ಅಲಂಕರಿಸಿ ಮಂಡಿಸಿದ ಬಜೆಟ್ ಇದಾಗಿದೆಯಷ್ಟೇ. ಇದು ಕೇವಲ ಅಲಂಕಾರಿಕ ಮುಂಗಡ ಪತ್ರ ಎಂದು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿಗಳು ಅನುಭವಿಗಳು. ಐದು ವರ್ಷ ಜಲಸಂಪನ್ಮೂಲ ಸಚಿವರಾಗಿದ್ದರು. ಎರಡೂವರೆ ವರ್ಷ ಗೃಹ ಸಚಿವರಾಗಿದ್ದರು. ಆದರೂ ಅವರು ಸ್ವತಂತ್ರವಾಗಿ ಮುಂಗಡ ಪತ್ರ ಮಂಡಿಸಿರುವ ಬಗ್ಗೆ ನನಗೆ ಸಂಶಯವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಯಾರದ್ದೋ ಒತ್ತಡಕ್ಕೆ ಸಿಲುಕಿ ಮಂಡಿಸಿದಂತಿದೆ. ತಮ್ಮ ಚೊಚ್ಚಲ ಮುಂಗಡ ಪತ್ರವನ್ನೇ ಎರಡು ಗಂಟೆಗಳ ಕಾಲ ಶ್ರಮಪಟ್ಟು ಓದಿದ್ದರಾ ಅನ್ನುವುದು ನನ್ನ ಅಭಿಪ್ರಾಯ. ಅವರಿಗೆ ವಿಶ್ವಾಸದ ಕೊರತೆ ಇದ್ದಂತೆ ಇತ್ತು ಎಂದು ನನಗೆ ಅನಿಸಿತು. ಕೋವಿಡ್ ನಂತರ ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಅಸಂಖ್ಯಾತ ಜನರು ಕೆಲಸ ಕಳೆದುಕೊಂಡಿದ್ದಾರೆ. ಹೊಸದಾಗಿ ಉದ್ಯೋಗಾವಕಾಶ ಆಗುತ್ತಿಲ್ಲ. ಯುವಜನರು ಕೆಲಸಕ್ಕಾಗಿ ಅಲೆಯುತ್ತಿದ್ದಾರೆ. ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಕೊರೊನಾದಿಂದ ಆಗಿದ್ದ ಅನಾಹುತವನ್ನು ಸುಧಾರಿಸುವ ಬಗ್ಗೆ ಬಜೆಟ್‍ನಲ್ಲಿ ಮಾತೇ ಇಲ್ಲ. ಸಂಕಷ್ಟ ಕಾಲದಲ್ಲೂ ಆದಾಯ ನಿರೀಕ್ಷೆ ಮಾಡಿದ್ದಾರೆ ಮುಖ್ಯಮಂತ್ರಿಗಳು ಎಂದು ಟೀಕಿಸಿದರು.ಉದ್ಯೋಗ ಮತ್ತು ಜೀವನೋಪಾಯದ ಬಗ್ಗೆ ಬಜೆಟ್ ನಲ್ಲಿ ಪರಿಹಾರ ಇರುತ್ತದೆ ಎನ್ನುವುದು ನನ್ನ ಮತ್ತು ಜನರ ನಿರೀಕ್ಷೆ ಆಗಿತ್ತು. ಆದರೂ ಉದ್ಯೋಗ ಮತ್ತು ಜೀವನೋಪಾಯದ ಬಗ್ಗೆ ಏನನ್ನೂ ಹೇಳಿಲ್ಲ. ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.ಕೃಷಿ, ನೀರಾವರಿ ಸೇರಿ ಐದು ವಲಯಗಳು ಎಂದು ಹೊಸ ಪ್ರಯೋಗ ಮಾಡಲು ಹೋಗಿದ್ದೇವೆ ಎಂದು ಪ್ರದರ್ಶನ ಮಾಡಿದ್ದಾರೆ. ಎಲ್ಲ ವಲಯಗಳನ್ನೂ ಮಿಕ್ಸ್ ಮಾಡಿ ಗ್ರೈಂಡರ್ ನಲ್ಲಿ ಹಾಕಿ ರುಬ್ಬಿದ ಹಾಗೆ ಮಾಡಿದ್ದಾರೆ. ಯಾರಿಗೂ ಏನೂ ಕಾಣಬಾರದು ಎನ್ನುವ ಹಾಗೆ ಮಾಡಿದ್ದಾರೆ ಎಂದು ಮುಂಗಡ ಪತ್ರವನ್ನು ವಿಶ್ಲೇಷಣೆ ಮಾಡಿದರು.ಮೀಸಲು ಅರಣ್ಯ ಪ್ರದೇಶ ಜಾರಕು ಬಂಡೆ ಅರಣ್ಯದಲ್ಲಿ ಪಾರ್ಕ್ ಮಾಡುವ ಬಗ್ಗೆ ಹೇಳುವುದಾದರೆ, ಈಗಾಗಲೇ ನಗರದಲ್ಲಿ ಅನೇಕ ಉದ್ಯಾನವನಗಳು ಇವೆ. ಅನೇಕ ಪಾರ್ಕ್‍ಗಳಲ್ಲಿ ಈಗಾಗಲೇ ಜನರು ವಾಯುವಿಹಾರ ಮಾಡುತ್ತಿದ್ದಾರೆ. ಲಾಲ್ ಬಾಗ್ ನಂಥಹ ಬೊಟಾನಿಕಲ್ ಗಾರ್ಡನ್ ನಗರದಲ್ಲಿದೆ. ದೇಶದ 12 ಬೊಟಾನಿಕಲ್ ಗಾರ್ಡೆನ್ ಗಳಲ್ಲಿ ಅದೂ ಒಂದು. ಅಲ್ಲಿ ಸಂಶೋಧನೆಯನ್ನು ಕೂಡ ನಡೆಸಬಹುದು. ದೇಶ-ವಿದೇಶಗಳ ಸಾವಿರಾರು ತಳಿಯ ಸಸ್ಯಗಳಿವೆ. ಆದರೆ ಮೀಸಲು ಅರಣ್ಯದ 350 ಎಕರೆಯಲ್ಲಿ ಉದ್ಯಾನವನ ಮಾಡುವ ಅಗತ್ಯವೇನು? ಇದು ಅತ್ಯಂತ ಬಾಲಿಷ ಪ್ರಸ್ತಾವನೆ ಎಂದು ತರಾಟೆಗೆ ತೆಗೆದುಕೊಂಡರು.ಕಳೆದ ಕಲಾಪದಲ್ಲಿ ನಡೆದ ರಾಜ್ಯಪಾಲರ ಭಾಷಣವೇ ಕಳಪೆ. ಬಜೆಟ್ ಕೂಡ ಹಾಗೆಯೇ ಇದೆ. ಇನ್ನು ಮೇಕೆದಾಟು ಯೋಜನೆಗೆ 1000 ಕೋಟಿ ಘೋಷಣೆ ಮಾಡಿದ್ದಾರೆ. ನಿನ್ನೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ ಅವರು ಈ ಯೋಜನೆಗೆ 5000 ಕೋಟಿ ನೀಡಬೇಕು ಎಂದು ಹೇಳಿದ್ದರು. ಬಹುಶಃ ಅವರಿಗೆ ಗೌರವ ಕೊಡೋದಿಕ್ಕೆ 1000 ಕೋಟಿ ಇಟ್ಟಿದ್ದಾರೇನೋ ಎಂದು ಲೇವಡಿ ಮಾಡಿದರು.ಭದ್ರಾ ಮೇಲ್ದಂಡೆ ಯೋಜನೆಗೆ 23,000 ಕೋಟಿ ರೂ. ಬೇಕು. ಆದರೆ ಇವರು ಕೊಟ್ಟಿರುವುದು ಕೇವಲ 3000 ಕೋಟಿ ರೂ. ಮಾತ್ರ. ಹತ್ತು ವರ್ಷವಾದರೂ ಒಂದು ಹನಿ ನೀರನ್ನೂ ಕೊಡದ ಎತ್ತಿನಹೊಳೆಗೆ ಮತ್ತೆ 3000 ಕೋಟಿ ರೂ. ಘೋಷಣೆ ಮಾಡಿದ್ದಾರೆ. ಅದಕ್ಕೆ ನಾನು ಹೇಳಿದ್ದು, ಇದು ಅಂಕಿ ಅಂಶಗಳ ಅಲಂಕಾರಿಕ ಬಜೆಟ್ ಎಂದು ತಿಳಿಸಿದರು.Sign in to your account
Username or Email Address


Password

 Remember Me


