ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಿಂದೆ ವಿದ್ಯಾರ್ಥಿ ಹಿತಬಿಟ್ಟು ಯಾವುದೇ ದುರುದ್ದೇಶ ಅಥವಾ ಹಿಡೆನ್ ಅಜೆಂಡಾ ಇಲ್ಲವೆಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.ಇದೇ ತಿಂಗಳ 23ರಿಂದ ಹೊಸ ಶಿಕ್ಷಣ ನೀತಿಯಡಿ ಕಲಿಕೆಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದೆಂದು ಪ್ರಕಟಿಸಿದ್ದಾರೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಕ್ರಿಸ್ತು ಜಯಂತಿ ಕಾಲೇಜು ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ ಕುರಿತು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರವೇಶ ಪ್ರಕ್ರಿಯೆಗೆ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡುವರು ಎಂದು ತಿಳಿಸಿದರು.ಶಿಕ್ಷಣ ನೀತಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡದೇ ಅಥವಾ ಅದನ್ನು ಸರಿಯಾಗಿ ಗ್ರಹಿಸದೇ ಟೀಕೆ ಮಾಡುವುದು ಸರಿಯಲ್ಲ. ಶಿಕ್ಷಣ ನೀತಿಯನ್ನು ವಿರೋಧ ಮಾಡುವುದೂ ದೇಶದ ಅಭಿವೃದ್ಧಿಯನ್ನು ವಿರೋಧಿಸುವುದು ಎರಡೂ ಒಂದೇ ಎಂದು ಸಚಿವರು ಅಭಿಪ್ರಾಯಪಟ್ಟರು. ವಿಶಾಲ ತಳಹದಿ ಹಾಗೂ ವಿಶಾಲ ದೃಷ್ಟಿಕೋನದಿಂದ ರೂಪಿತವಾಗಿರುವ ಶಿಕ್ಷಣ ನೀತಿಯಲ್ಲಿ ಬಹು ಆಯ್ಕೆಯ ಕಲಿಕೆಗೆ ವಿಪುಲ ಅವಕಾಶವಿದೆ. ಇಷ್ಟು ದಿನ ನಾವು ಹೇಳಿದ್ದನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಮಕ್ಕಳ ಪರಿಪೂರ್ಣ ವಿಕಾಸಕ್ಕೆ ಅವಕಾಶ ಇರಲಿಲ್ಲ. ಇನ್ನು ಮುಂದೆ ಅವರ ಇಚ್ಛೆಯ ವಿಷಯವನ್ನು ಕಲಿಯಲಿದ್ದಾರೆಂದ ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಇತರೆ ಯಾವುದೇ ಕ್ಷೇತ್ರವೇ ಇರಲಿ ದೇಶ ಎದುರಿಸುತ್ತಿರುವ ಪ್ರತಿಯೊಂದು ಸವಾಲಿಗೂ ಶಿಕ್ಷಣ ನೀತಿಯಲ್ಲಿ ಉತ್ತರವಿದೆ ಎಂದು ತಿಳಿಸಿದರು. ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಆರೋಗ್ಯ ವೃದ್ಧಿಗೆ ಕ್ರಮ: ಡಾ.ಕೆ.ಸುಧಾಕರ್ಯಾವುದೇ ದೇಶ, ಯಾವುದೇ ಹಂತದಲ್ಲಿ ಹಾಗೂ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಅದನ್ನು ನಿರಾಯಾಸವಾಗಿ ಬಗೆಹರಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರವೇ ಇದೆ ಎಂಬುದು ನನ್ನ ಅಚಲ ನಂಬಿಕೆ. ಶಿಕ್ಷಣ ಇಲ್ಲದೆ ಅಭಿವೃದ್ಧಿ ಎನ್ನುವುದು ಮರೀಚಿಕೆ. ಆಮೂಲಾಗ್ರ ಮತ್ತು ರಚನಾತ್ಮಕ ಪ್ರಗತಿ ಸಾಧಿಸಬೇಕಿದ್ದರೆ ಶಿಕ್ಷಣಕ್ಕೆ ಒತ್ತು ನೀಡಲೇಬೇಕು. ಈ ನಿಟ್ಟಿನಲ್ಲಿ ಜರ್ಮನಿ, ದಕ್ಷಿಣ ಕೊರಿಯಾ, ಜಪಾನ್ ನಂಥ ಚಿಕ್ಕ ಚಿಕ್ಕ ದೇಶಗಳು ಅದ್ಭುತಗಳನ್ನೇ ಸೃಷ್ಟಿ ಮಾಡಿವೆ ಎಂದರು ಸಚಿವರು. ಶಿಕ್ಷಣ ಸಂಸ್ಥೆಗಳನ್ನು ಅತ್ಯುತ್ತಮವಾಗಿ ರೂಪಿಸಬೇಕು. ವಿದ್ಯಾರ್ಥಿ ಕೇಂದ್ರಿತ ವ್ಯವಸ್ಥೆ ಅಲ್ಲಿರಬೇಕು. ಮುಂದಿನ ಅನೇಕ ವರ್ಷಗಳ ಮುನ್ನೋಟ ಇಟ್ಟುಕೊಂಡು ಸಂಸ್ಥೆಗಳನ್ನು ಕಟ್ಟಿ ಬೆಳೆಸಬೇಕು. ಅದಕ್ಕಾಗಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಇಂಥ ಸಂಸ್ಥೆಗಳನ್ನು ಆಮೂಲಾಗ್ರವಾಗಿ ಬೆಳೆಸಲು ನೆರವಾಗಬೇಕು. ಯಾವುದೇ ಶಿಕ್ಷಣ ಸಂಸ್ಥೆಯೂ ಲಾಭ ಗಳಿಕೆಗಾಗಿ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಸಚಿವರು ತಿಳಿಸಿದರು.ನಮ್ಮ ದೇಶದ ಜನಸಂಖ್ಯೆ ಈಗ 130 ಕೋಟಿ ಮೀರುತ್ತಿದೆ. ಅದೇ ಪ್ರಮಾಣದಲ್ಲಿ ಸವಾಲುಗಳು, ಅಗತ್ಯಗಳು ಹೆಚ್ಚುತ್ತಿವೆ. ಇವೆಲ್ಲವನ್ನೂ ಎದುರಿಸಿ ಗೆಲ್ಲಬೇಕಾದರೆ ನಮಗೆ ಎದುರಿಗಿರುವ ಏಕೈಕ ಸಾಧನವೆಂದರೆ ಶಿಕ್ಷಣ ಮಾತ್ರ ಅಂತ ಸ್ಪಷ್ಟಪಡಿಸಿದರು.Sign in to your account
Username or Email Address


Password

 Remember Me


