ವಿಜಯಪುರ: ಆನಂದ್ ಸಿಂಗ್ ಅವರು ಒಬ್ಬ ಪ್ರಬುದ್ಧ ರಾಜಕಾರಣಿ. ಅವರೊಬ್ಬ ಒಳ್ಳೆಯ, ಕ್ರೀಯಾಶೀಲ ವ್ಯಕ್ತಿ. ಅವರನ್ನು ಸಿಎಂ ಗೌರವಯುತ ವಾಗಿ ನೋಡಿಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ಆನಂದ್ ಸಿಂಗ್ ಪರ ಬ್ಯಾಟ್ ಬೀಸಿದರು.ಆನಂದ್ ಸಿಂಗ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಅವರಿಗೆ ಒಂದು ಒಳ್ಳೆಯ ಖಾತೆ ಕೊಟ್ಟರೆ ತಪ್ಪೇನಿಲ್ಲ. ಕೆಲಸ ಮಾಡುವವರಿಗೆ ಕೊಡಬೇಕು. ಅವರು ಅರಣ್ಯ ಇಲಾಖೆಯ ಸಚಿವರಿದ್ದಾಗ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಒಳ್ಳೆಯ ಖಾತೆ ಕೊಡುವುದು ಸೂಕ್ತ. ಬಿಜೆಪಿ ಸರ್ಕಾರ ಬರಬೇಕಾದರೆ ಮೊದಲು ರಾಜೀನಾಮೆ ಕೊಟ್ಟವರು ಆನಂದ್ ಸಿಂಗ್. ನನಗೆ ವಿಶ್ವಾಸ ಇದೆ ಹೈಕಮಾಂಡ್ ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದರು.ದೇವೇಗೌಡರ ಮನೆಗೆ ಬೊಮ್ಮಾಯಿ ಭೇಟಿ ಆಗಿದ್ದರ ಬಗ್ಗೆ ನನ್ನ ಆಕ್ಷೇಪ ಇಲ್ಲ. ರಾಷ್ಟ್ರದ ಮಾಜಿ ಪ್ರಧಾನಿಗಳು, ರಾಜ್ಯದ ಹಿರಿಯರು, ಆದರೆ ದೇವೇಗೌಡರನ್ನಷ್ಟೇ ಭೇಟಿ ಆಗಿದ್ದು ಸರಿಯಲ್ಲ. ಈ ಹಿಂದೆ ಎಸ್.ಎಂ ಕೃಷ್ಣ ಅವರು ಸಿಎಂ ಆದಾಗ ಎಲ್ಲ ಕರ್ನಾಟಕದ ಮಾಜಿ ಸಿಎಂಗಳನ್ನು ಭೇಟಿ ಆಗಿದ್ದರು. ಹಾಗೆ ಬೊಮ್ಮಾಯಿ ಅವರು ಕುಮಾರಸ್ವಾಮಿ ಅವರ ಮನೆಗೆ, ಎಸ್.ಎಂ ಕೃಷ್ಣ ಅವರ ಮನೆಗೆ ಮತ್ತು ಇತರ ಮಾಜಿ ಸಿಎಂಗಳ ಮನೆಗೆ ಗೌರವಯುತವಾಗಿ ಹೋಗಿ ಬಂದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: 2ಎ ಮೀಸಲಾತಿ ಹೋರಾಟ ಮುಂದುವರಿಯುತ್ತದೆ: ಯತ್ನಾಳ್ಪಾಪ ಪ್ರೀತಂಗೌಡ ಜೆಡಿಎಸ್ ವಿರುದ್ಧ ಅಲ್ಲಿ ಹೋರಾಟ ಮಾಡುತ್ತಿರುತ್ತಾರೆ. ಪಾಪ ಬೊಮ್ಮಾಯಿ ಅವರಿಗೆ ಸಮಸ್ಯೆ ಏನಂದ್ರೆ, ಕೂಸು ಮಲಗಿದೆ, ಅದನ್ನು ಚೂಟುತ್ತಾರೆ, ಅದು ಅಳಲು ಪ್ರಾರಂಭಿಸುತ್ತೆ ಯಾಕಪ್ಪ ಯಾಕೆ ಅಳುತ್ತಿದ್ದಿಯಾ ಎಂದು ಕೇಳುತ್ತಿದ್ದಾರೆ ಎನ್ನುವ ಮೂಲಕ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದರು.






 Advertisement 




Sign in to your account
Username or Email Address


Password

 Remember Me


