ಕಲಬುರಗಿ: ಡಬಲ್ ಇಂಜಿನ್ ಸರ್ಕಾರದಿಂದ ಕಲ್ಯಾಣ ಕರ್ನಾಟಕದ ಕಂದಾಯ ವಿಭಾಗ ಕಲಬುರಗಿ ಜಿಲ್ಲೆಗೆ ಡಬಲ್ ದೋಖಾ ಆಗಿದೆ. ಸಂಪುಟದಲ್ಲಿ ಕಲಬುರಗಿ ಜಿಲ್ಲೆ ಕಡಗಣನೆ ಮಾಡಲಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಂಪುಟದ ನೂತನ ಸಚಿವರ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿ ಜಿಲ್ಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಜಿಲ್ಲೆಗೆ ಅನ್ಯಾಯ ನಿರಂತರವಾಗಿ ಮುಂದುವರೆದಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೆ ಬಿಜೆಪಿ ಸರ್ಕಾರ ಮತ್ತೊಮ್ಮೆ ದೋಖಾ ಮಾಡಿದೆ. ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅದರಲ್ಲೂ ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸದೇ ಅನ್ಯಾಯವೆಸಗಿದ್ದರು. ಈಗ ಅವರ ಉತ್ತರಾಧಿಕಾರಿ ಬೊಮ್ಮಾಯಿ ಅವರು ಕೂಡ ಮತ್ತೊಮ್ಮೆ ಈ ಪ್ರದೇಶವನ್ನು ಕಡೆಗಣನೆ ಮಾಡುವ ಮೂಲಕ ಅನ್ಯಾಯದ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಂಟು ಸಚಿವರನ್ನು ಹೊಂದಿದ್ದ ಕಲಬುರಗಿ ಜಿಲ್ಲೆ ಈಗ ಒಬ್ಬರೇ ಒಬ್ಬ ಸಚಿವರನ್ನೂ ಹೊಂದದೆ ಅನಾಥವಾಗಿರುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯತನ ಮತ್ತು ಬಿಜೆಪಿ ಸಂಸದ ಶಾಸಕರ ಅಸಹಾಯಕತೆ ಕಾರಣವಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸೋಲಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ದಿ ಹೊಳೆ ಹರಿಸುವುದಾಗಿ ಹೇಳಿ ಜನರನ್ನು ಮರುಳು ಮಾಡಿ ಓಟು ಗಿಟ್ಟಿಸಿದ್ದ ಕಲಬುರಗಿ ಜಿಲ್ಲೆಯ ಮಹಾನ್ ನಾಯಕರು, ಖರ್ಗೆ ಅವರು ಕೇಂದ್ರ ಸಚಿವರಾಗಿದ್ದಾಗ ಮಂಜೂರು ಮಾಡಿದ್ದ ಹಲವಾರು ಯೋಜನೆಗೆಳು ವಾಪಸ್ ಹೋದಾಗ ಧ್ವನಿ ಎತ್ತಲಿಲ್ಲ ಎಂದು ಕಿಡಿಕಾರಿದ್ದಾರೆ.ರಾಜ್ಯ ಸರ್ಕಾರ ಕೆಕೆಆರ್‍ಡಿಬಿಗೆ ನಿಗದಿತ ವಾರ್ಷಿಕ ಅನುದಾನ ಬಿಡುಗಡೆ ಮಾಡಿಲ್ಲ, ನೆರೆಯಿಂದ ಜನರು ತೊಂದರೆಯಲ್ಲಿದ್ದಾಗ ಅವರ ನೆರವಿಗೆ ಧಾವಿಸುವಲ್ಲಿ ವಿಫಲವಾಗಿದೆ. ಕೊರೊನಾ ಸಾಂಕ್ರಾಮಿಕದಿಂದ ಜಿಲ್ಲೆಯ ಜನರು ಬೆಡ್, ಆಕ್ಸಿಜನ್, ಲಸಿಕೆ, ಅಂಬುಲೆನ್ಸ್ ಕೊರತೆಯಿಂದ ನರಳುತ್ತಿರುವಾಗ ಬೆನ್ನೆಲುಬು ಇಲ್ಲದ ಬಿಜೆಪಿ ಸಂಸದ, ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಜನರಿಗೆ ವೈದ್ಯಕೀಯ ನೆರವು ಕೊಡಿಸಲಿಲ್ಲ ಎಂದು ಕಿಡಿಕಾರಿದರು.ಈಗ ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಸ್ಥಾನ ನೀಡದಿರುವಾಗಲೂ ಬಾಯಿ ಬಿಡುತ್ತಿಲ್ಲ ಎಂದ ಮೇಲೆ ಜನರು ಇಂತಹ ಮಹಾನ್ ನಾಯಕರಿಂದ ಮತ್ತೇನು ನಿರೀಕ್ಷೆ ಮಾಡಬಹುದು ಎಂದು ಹರಿಹಾಯ್ದಿದ್ದಾರೆ.Sign in to your account
Username or Email Address


Password

 Remember Me


