ಬಾಗಲಕೋಟೆ: ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದ ಮಗನನ್ನು ತಡೆಯಲು ಬಂದ ಸ್ವಂತ ತಂದೆಯನ್ನೇ ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ.ಜಿಲ್ಲೆಯ ಹುನಗುಂದ ತಾಲೂಕಿನ ಚೌಡ ಕಮಲದಿನ್ನಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರಾಜೇಂದ್ರ ಗೌಡರ್ ತನ್ನ ತಂದೆಯನ್ನು ಕೊಲೆ ಮಾಡಿದ್ದಾನೆ. ಪತ್ನಿ ಮೇಲೆ ಅನುಮಾನಗೊಂಡು ಪ್ರತಿದಿನ ಹಲ್ಲೆ ಮಾಡುತ್ತಿದ್ದ ಆರೋಪಿ ರಾಜೇಂದ್ರ, ನಿನ್ನೆ ತಡರಾತ್ರಿ ಸಹ ಕುಡಿದ ಮತ್ತಿನಲ್ಲಿ ಮನೆಗೆ ಬಂದ ವೇಳೆ ಪತ್ನಿ ಲಕ್ಷ್ಮಿಬಾಯಿ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ರಾಜೇಂದ್ರನ ತಂದೆ 72 ವರ್ಷದ ಶಿವಾನಂದ್ ಗೌಡರ್ ಮಗನನ್ನು ತಡೆಯಲು ಮುಂದಾಗಿದ್ದಾರೆ.ಕೋಪಗೊಂಡ ಆರೋಪಿ ರಾಜೇಂದ್ರ, ನಿನಗೂ ನನ್ನ ಪತ್ನಿಗೂ ಏನು ಸಂಬಂಧ ಎಂದು ಹೇಳಿ ತಂದೆ ಎನ್ನುವುದನ್ನೂ ನೋಡದೆ ಶಿವಾನಂದ್ ಗೌಡರ್ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ರಾಡ್ ನಿಂದ ಹೊಡೆದಿದ್ದಕ್ಕೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ವೃದ್ಧ ಶಿವಾನಂದ್ ಗೌಡರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಆರೋಪಿ ರಾಜೇಂದ್ರನ ಪತ್ನಿ ಲಕ್ಷ್ಮೀಬಾಯಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಾಜೇಂದ್ರನನ್ನ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.Sign in to your account
Username or Email Address


Password

 Remember Me


