ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿರುವ ಸಿನಿಮಾ ‘ಹೀರೋ’. ರಿಷಭ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷಣ್ ನಾಯಕ ನಟಿ. ಟಿ.ಎನ್. ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಚಿಕ್ಕಮಗಳೂರು ಬೆಡಗಿ ಗಾನವಿ ಲಕ್ಷಣ್.ಮೊದಲ ಧಾರಾವಾಹಿ ಮೂಲಕವೇ ಕನ್ನಡಿಗರ ಮನದಲ್ಲಿ ಬಹುಬೇಗ ಜಾಗ ಪಡೆದು ಖ್ಯಾತಿ ಗಳಿಸಿದ್ರು. ಸಿನಿಮಾದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಬಹುದೊಡ್ಡ ಕನಸಿಟ್ಟುಕೊಂಡಿದ್ದ ಇವರಿಗೆ ‘ಹೀರೋ’ ಸಿನಿಮಾದಲ್ಲಿ ನಟಿಸುವ ಸುವರ್ಣಾವಕಾಶ ಒದಗಿಬಂತು. ‘ಹೀರೋ’ ಮೂಲಕ ಬೆಳ್ಳಿತೆರೆ ಮೇಲೆ ಅದೃಷ್ಟ ಪರೀಕ್ಷೆಗಿಳಿದಿರುವ ಗಾನವಿ ಲಕ್ಷಣ್ ತಮ್ಮ ಮೊದಲ ಸಿನಿಮಾ ಮೇಲೆ ಸಾಕಷ್ಟು ಭರವಸೆಯನ್ನಿಟ್ಟುಕೊಂಡಿದ್ದಾರೆ. ಮಾರ್ಚ್ 5ರ ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿರುವ ನಟಿ ಗಾನವಿ ಲಕ್ಷಣ್ ಜನರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.ಚೊಚ್ಚಲ ಸಿನಿಮಾದಲ್ಲೇ ಪರ್ಫಾಮೆನ್ಸ್ ಗೆ ಹೆಚ್ಚು ಅವಕಾಶ ಸಿಕ್ಕಿರೋದು ತುಂಬಾ ಖುಷಿ ಕೊಟ್ಟಿದೆ ಎನ್ನುತ್ತಾರೆ ಗಾನವಿ ಲಕ್ಷಣ್. ತಮ್ಮ ಪಾತ್ರ ನ್ಯಾಚುರಲ್ ಆಗಿ ಮೂಡಿ ಬಂದಿದ್ದು, ಹಲವು ಶೇಡ್ ನಲ್ಲಿ ಕಾಣಸಿಗಲಿದ್ದೇನೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ. ನಿರ್ದೇಶಕ ಭರತ್ ರಾಜ್ ಹಾಗೂ ರಿಷಬ್ ಶೆಟ್ಟಿ ತಂಡದ ಜೊತೆ ಕೆಲಸ ಮಾಡಿದ ಅನುಭವ ಖುಷಿ ಕೊಟ್ಟಿದ್ದು ಜನರು ಕೂಡ ಸಿನಿಮಾ ಮೇಲೆ ಪ್ರೀತಿ ತೋರಿಸುತ್ತಾರೆ ಎಂಬ ಭರವಸೆಯಲ್ಲಿದ್ದೇನೆ ಎಂದಿದ್ದಾರೆ.ರಿಷಭ್ ಶೆಟ್ಟಿ ನಟಿಸಿ ನಿರ್ಮಾಣ ಮಾಡುತ್ತಿರುವ ‘ಹೀರೋ’ ಚಿತ್ರಕ್ಕೆ ಭರತ್ ರಾಜ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಆಕ್ಷನ್, ಲವ್, ಸೆಂಟಿಮೆಂಟ್, ಕಾಮಿಡಿ ಎಲಿಮೆಂಟ್ ಗಳನ್ನು ಒಳಗೊಂಡಿರುವ ‘ಹೀರೋ’ ಸಿನಿಮಾ ನೋಡುಗರಿಗೆ ಹೊಸ ಫೀಲ್ ನೀಡಲಿದೆ ಎನ್ನುತ್ತದೆ ಚಿತ್ರತಂಡ. ಈಗಾಗಲೇ ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆದಿದ್ದು ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ ಸಿನಿರಸಿಕರು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ .ಎಸ್. ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ತಾರಾಗಣದಲ್ಲಿ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.Sign in to your account
Username or Email Address


Password

 Remember Me


