ಚಿಕ್ಕಬಳ್ಳಾಪುರ: ನಂದಿ ಗಿರಿಧಾಮವನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.ನಂದಿಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿಬೆಟ್ಟ ಹಾಗೂ ಸುತ್ತಲಿನ ಪ್ರದೇಶ ಆಕರ್ಷಕವಾಗಿದೆ. ಇದಕ್ಕೆ ಐತಿಹಾಸಿಕ, ಧಾರ್ಮಿಕ ಪ್ರಾಮುಖ್ಯವಿದ್ದು, ವಿಶೇಷವಾದ ಸಸ್ಯ ಸಂಪತ್ತು ಇದೆ. ಇವೆಲ್ಲವನ್ನೂ ಗಮನಿಸಿ ಪ್ರವಾಸೋದ್ಯಮ ಕ್ಷೇತ್ರವಾಗಿಸಬಹುದು. ಇದಕ್ಕಾಗಿ ನಮ್ಮ ಸರ್ಕಾರ ಈಗಾಗಲೇ 10 ಕೋಟಿ ರೂ. ಅನುದಾನ ನೀಡಿದೆ ಎಂದು ತಿಳಿಸಿದರು.ಕಳೆದ 15 ವರ್ಷಗಳಿಂದ ರೋಪ್ ವೇ ಬೇಕು ಎಂದು ಜನರು ಬೇಡಿಕೆ ಇಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕಂಪನಿಯೊಂದು ಇದನ್ನು ಮಾಡಲು ಮುಂದಾಗಿ ನಂತರ ಕಾರಣಾಂತರದಿಂದ ಯೋಜನೆ ಕೈ ಬಿಟ್ಟಿತ್ತು. ಈಗ ಆ ಕನಸು ನನಸಾಗಲಿದೆ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು 10 ಎಕರೆಗೂ ಹೆಚ್ಚು ಜಾಗವನ್ನು ಪಡೆಯಲು ಪ್ರಯತ್ನಿಸಲಾಗಿದೆ. ಈ ರೀತಿ ಮಾಸ್ಟರ್ ಪ್ಲಾನ್ ಮಾಡಿ ಅನುಷ್ಠಾನಗೊಳಿಸಲಾಗುವುದು. ಮೂರ್ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಯಬಹುದು ಎಂದರು.ತಕ್ಷಣದಲ್ಲಿ ಟೆಂಡರ್ ಆಗಿ ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ನಂದಿಬೆಟ್ಟವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ರೂಪುಗೊಳಿಸಬೇಕಿದೆ. ಈ ತಾಣವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ಬೆಂಗಳೂರು ನಗರದಿಂದ ಒಂದು ಗಂಟೆಯಲ್ಲಿ ಬರಬಹುದು. ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.ಇದರ ಜೊತೆಗೆ ಎಕೋ-ಟೂರಿಸಂ, ಸುತ್ತಮುತ್ತಲಿನ 5 ಬೆಟ್ಟಗಳಿಗೆ ಚಾರಣ ದಾರಿಗಳು, ಪುರಾತತ್ವ ಸ್ಮಾರಕಗಳು, ನೆಲ್ಲಿಕಾಯಿ ಬಸವಣ್ಣ ಮತ್ತು ಮಂಟಪಗಳು ಸಂರಕ್ಷಣೆ, ಸುಂದರೀಕರಣ ಸೇರಿದಂತೆ ವಿಶ್ವದರ್ಜೆಯ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮುಖ್ಯಮಂತ್ರಿಗಳು ಮಂಡಿಸಲಿರುವ ಆಯವ್ಯಯದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಲಿದ್ದಾರೆ. ರಾಜ್ಯದಲ್ಲಿ ವಿಶಿಷ್ಠ ಪ್ರವಾಸಿ ತಾಣಗಳಿವೆ ಎಂದರು.ನಂದಿಬೆಟ್ಟದಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಸಂಪೂರ್ಣ ನಿಷೇಧಿಸಲು ತೀರ್ಮಾನಿಸಲಾಗಿದೆ. ಯಾವುದೇ ರೀತಿಯ ಪ್ಲಾಸ್ಟಿಕ್ ಒಳಗೆ ತೆಗೆದುಕೊಂಡು ಹೋಗಲು ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ರೋಪ್ ವೇ ಕನಸು ನನಸು
ನಂದಿ ಗಿರಿಧಾಮಕ್ಕೆ ರೋಪ್ ವೇ ಮಾರ್ಗ ನಿರ್ಮಾಣದ ಕನಸು ನನಸಾಗುವ ಕಾಲ ದೂರ ಇಲ್ಲ ಎಂದು ಸುಧಾಕರ್ ತಿಳಿಸಿದರು. ಇಂದು ಬೆಳ್ಳಂ ಬೆಳಗ್ಗೆ ನಂದಿ ಗಿರಿಧಾಮಕ್ಕೆ ಆಗಮಿಸಿದ ಸಚಿವ ಸುಧಾಕರ್, ಕಾಲ್ನಡಿಗೆ ಮೂಲಕ ಇಡೀ ನಂದಿಬೆಟ್ಟದಲ್ಲಿ ರೌಂಡ್ಸ್ ಹಾಕಿದರು. ಅಭಿವೃದ್ದಿ ಕಾರ್ಯಗಳ ಸಂಬಂಧ ನಂದಿಗಿರಿಧಾಮದ ನೆಹರು ನಿಲಯದಲ್ಲಿ ಸಭೆ ನಡೆಸಿದರು. ನಂದಿಗಿರಿಧಾಮ ಅಭಿವೃದ್ದಿಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಅಭಿವೃದ್ದಿ ಕಾರ್ಯಗಳಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಕೂಡಲೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು. ಪಾಥ್ ವೇನಲ್ಲಿ ಸ್ವಚ್ಛತೆ ಕಾಪಾಡಿಲ್ಲ, ಗಿಡಗಳನ್ನು ತೆಗೆದಿಲ್ಲ ಎಂದು ತೋಟಗಾರಿಕಾ ಅಧಿಕಾರಿಗಳ ವಿರುದ್ಧ ಸಚಿವ ಸುಧಾಕರ್ ಗರಂ ಆದರು.Sign in to your account
Username or Email Address


Password

 Remember Me


