ಶಿವಮೊಗ್ಗ: ಜಿಲ್ಲೆಯ ಹುಣಸೋಡು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಜಮೀನಿನ ಮಾಲೀಕರಾದ ಶಂಕರಗೌಡ ಕುಲಕರ್ಣಿ, ಅವಿನಾಶ್ ಕುಲಕರ್ಣಿ ಹಾಗೂ ಸ್ಫೋಟಕ ಮಾರಾಟ ಮಾಡಿದ್ದ ಆಂಧ್ರಪ್ರದೇಶದ ಶ್ರೀರಾಮುಲು ಹಾಗೂ ಈತನ ಪುತ್ರ ಮಂಜುನಾಥ್ ಸಾಯಿ ಎಂದು ಗುರುತಿಸಲಾಗಿದೆ. ಘಟನೆ ನಡೆದ ನಂತರ ಆರೋಪಿಗಳ ಪತ್ತೆ ಕಾರ್ಯಕ್ಕೆ ಆರು ತಂಡಗಳನ್ನು ರಚಿಸಲಾಗಿತ್ತು. ಎಲ್ಲ ತಂಡಗಳು ಕಾರ್ಯೋನ್ಮುಖರಾಗಿ ಆರೋಪಿಗಳ ಪತ್ತೆಗಾಗಿ ಹೊರ ರಾಜ್ಯಗಳಲ್ಲಿಯು ಶೋಧ ಕಾರ್ಯ ನಡೆಸಿದ್ದರು.ಆರಂಭದಲ್ಲಿಯೇ ನಾಲ್ಕು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಇದೀಗ ಮತ್ತೆ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಮೂಲಕ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 8 ಮಂದಿ ಬಂಧನವಾಗಿದೆ. ಗೋದಾಮಿನಲ್ಲಿ ಸ್ಫೋಟಕ ವಸ್ತು ಸಂಗ್ರಹಕ್ಕೆ ಮಾರಾಟಗಾರ ಶ್ರೀರಾಮುಲು ಪರವಾನಗಿ ಪಡೆದಿದ್ದರೂ, ಸಾಗಾಣಿಕೆಗೆ ಪರವಾನಗಿ ಪಡೆದಿರಲಿಲ್ಲ. ಈ ಹಿನ್ನಲೆಯಲ್ಲಿ ಈತನ ವಿರುದ್ಧ ಆಂಧ್ರದಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.ಮೃತಪಟ್ಟ 6 ಮಂದಿಯಲ್ಲಿ ಐದು ಮಂದಿಯ ಗುರುತು ಪತ್ತೆಯಾಗಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿತ್ತು. ಆದರೆ 6ನೇ ವ್ಯಕ್ತಿಯ ಮೃತದೇಹ 10 ತುಂಡುಗಳಾಗಿ ಬಿದ್ದಿತ್ತು. ಗುರುತು ಹಾಗೂ ಮೃತಪಟ್ಟವನ ವಾರಸುದಾರರು ಪತ್ತೆಯಾಗದ ಕಾರಣ ಮೃತದೇಹದ ಎಲ್ಲ ತುಂಡುಗಳನ್ನು ಸೇರಿಸಿ ಪೊಲೀಸರೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಅಲ್ಲದೆ ಮೃತದೇಹದ ಗುರುತು ಪತ್ತೆಗಾಗಿ 52 ಮಂದಿಯ ಡಿಎನ್ ಎ ಅನ್ನು ಪರೀಕ್ಷಿಸಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಮೃತದೇಹದ ಗುರುತು ಪತ್ತೆಯಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ತಿಳಿಸಿದ್ದಾರೆ.Sign in to your account
Username or Email Address


Password

 Remember Me


