ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಖಾಲಿ ಇರುವ ಸೀಟ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ಮಾಡುವ ಅಗತ್ಯ ಇದ್ದು, ಜನವರಿ 15ರವರೆಗೆ ಅವಕಾಶ ನೀಡಬೇಕು ಎಂದು ಕೋರಿ ಉನ್ನತ ಶಿಕ್ಷಣ ಇಲಾಖೆಯು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷರಿಗೆ ಪತ್ರ ಬರೆದಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ಉಳಿದಿರುವ ವೃತ್ತಿಪರ ಕೋರ್ಸ್ ಗಳ ಸೀಟ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಸಲ, ಕೊನೆಯದಾಗಿ ಅವಕಾಶ ನೀಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಇದರ ಜೊತೆಗೆ ಕರ್ನಾಟಕ ಅನುದಾನರಹಿತ ಖಾಸಗಿ ಶೈಕ್ಷಣಿಕ ಕಾಲೇಜುಗಳ ಸಂಸ್ಥೆ (ಕೆಯುಪಿಇಸಿಎ) ಕೂಡ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಜನವರಿ 15ರವರೆಗೆ ಕಾಲಾವಕಾಶ ವಿಸ್ತರಿಸಲು ಕೋರಿದೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪತ್ರ ಬರೆಯಲಾಗಿದೆ ಎಂದು ವಿವರಿಸಿದ್ದಾರೆ.ಈ ಹಿಂದಿನ ಅನುಮತಿಯ ಪ್ರಕಾರ ವೃತ್ತಿಪರ ಕೋರ್ಸ್ ಗೆ ಪ್ರವೇಶ ಪಡೆಯಲು ಡಿ.31 ಕೊನೇಯ ದಿನವಾಗಿದೆ. ಆದರೆ ಯುಜಿ ಸಿಇಟಿ ಮಾಪ್ ಅಪ್ ಸುತ್ತಿನಲ್ಲಿ ಇಂಜಿನಿಯರಿಂಗ್ ಸೀಟ್ ಪಡೆದಿದ್ದ ಕೆಲ ವಿದ್ಯಾರ್ಥಿಗಳು, ಸೀಟ್ ಹಿಂಪಡೆದು ಶುಲ್ಕ ಮರುಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ಸೋಮವಾರ ಪೋಷಕರೊಂದಿಗೆ ಪ್ರತಿಭಟನೆ ನಡೆಸಿದ್ದರು.ಈ ವೇಳೆ ಇಂಜಿನಿಯರಿಂಗ್ ಬದಲು ಆಯುಷ್, ಬಿಎಸ್ಸಿ, ಬಿ.ಕಾಂ. ಅಥವಾ ಇನ್ನಿತರ ಕೋರ್ಸ್ ಓದಲು ಇಚ್ಛಿಸುತ್ತೇವೆ. ಆಯುಷ್ ಕೋರ್ಸ್ ಗಳಿಗೆ ಇನ್ನೂ ಕೌನ್ಸೆಲಿಂಗ್ ನಡೆಸಿಲ್ಲ. ಆದ್ದರಿಂದ ಇಂಜಿನಿಯರಿಂಗ್ ಸೀಟ್ ಹಿಂದಕ್ಕೆ ಪಡೆದರೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದ್ದರು.Sign in to your account
Username or Email Address


Password

 Remember Me


