ವಿಜಯಪುರ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆಂದು ತಂಗಿಯನ್ನು ಕರೆತಂದಿದ್ದ ಅಣ್ಣ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.ಸಾವನ್ನಪ್ಪಿದ ಯುವಕನನ್ನು ಸಾಗರ್ (19) ಎಂದು ಗುರುತಿಸಲಾಗಿದೆ. ಜಿಲ್ಲೆಯ ಬಸವನಬಾ ಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಸಾಗರ್ ತನ್ನ ತಂಗಿಯನ್ನು ಕರೆದುಕೊಂಡು ಬಂದಿದ್ದ. ತಂಗಿಯನ್ನು ಪರೀಕ್ಷೆಗೆ ಕಳುಹಿಸಿ ಪರೀಕ್ಷೆ ಮುಗಿಯುವರೆಗೂ ಶಾಲೆಯ ಬಳಿಯೇ ಕಾದು ಕುಳಿತ್ತಿದ್ದ.ಈ ವೇಳೆ ಸಾಗರ್ ತಂಗಿಗೆ ನಕಲು ಪತ್ರ ಕೊಡಲು ಹೋದಾಗ ಪೊಲೀಸರು ಬೆನ್ನಟ್ಟಿದ್ದಾರೆ. ಆಗ ಮೊದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಾಗರ ಹೆದರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಆದರೆ ಈ ಹೇಳಿಕೆಯನ್ನು ಯುವಕನ ಕುಟುಂಬದವರು ತಳ್ಳಿ ಹಾಕಿದ್ದು, ಪೊಲೀಸರು ಲಾಠಿಯಿಂದ ಹೊಡೆದ ಕಾರಣ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ.ಜೊತೆ ಇದ್ದ ಪ್ರತ್ಯಕ್ಷದರ್ಶಿ ಈ ವಿಚಾರವಾಗಿ ಮಾಹಿತಿ ನೀಡಿದ್ದು, ನಾವು ಪರೀಕ್ಷಾ ಕೇಂದ್ರದ ಹೊರಗಡೆ ಕುಳಿತಿದ್ದೆವು. ಆಗ ಅಲ್ಲಿಗೆ ಪೊಲೀಸ್ ಬಂದು ಪರೀಕ್ಷೆ ಮುಗಿಯುವವರೆಗೂ ಇಲ್ಲಿ ಕುಳಿತುಕೊಳ್ಳಬಾರದು ಎಂದು ಹೇಳಿದರು. ಆಗ ನಾವು ಬೈಕ್ ಹತ್ತಿ ಹೊರಟಿದ್ದೆವು. ಆ ಸಂದರ್ಭದಲ್ಲಿ ಪೇದೆಯೊಬ್ಬರು ನನಗೂ ಕಾಲಿಗೆ ಒಂದು ಏಟು ಹೊಡೆದರು. ನಂತರ ಬೈಕ್‍ನಲ್ಲಿ ನನ್ನ ಹಿಂದೆ ಕುಳಿತಿದ್ದ ಸಾಗರ್ ಬೆನ್ನಿಗೆ ಹೊಡೆದರು. ಆಗ ಆತ ಕೆಳಗಡೆ ಬಿದ್ದ. ನಂತರ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದೆವು ಎಂದು ಹೇಳಿದ್ದಾರೆ.ಸದ್ಯ ಸಾಗರ್ ಹೃದಯಾಘಾತದಿಂದ ಸಾವನ್ನಪ್ಪಿದನೋ ಅಥವಾ ಪೊಲೀಸ್‍ರ ಲಾಠಿ ಏಟಿಗೆ ಸಾವನ್ನಪ್ಪಿದನೋ ಎಂಬುದು ಸೂಕ್ತ ತನಿಖೆಯ ನಂತರ ತಿಳಿಯಬೇಕಿದೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.Sign in to your account
Username or Email Address


Password

 Remember Me


