ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಹಾಡುಹಗಲೇ ಆರು ದಿನಗಳ ಹಸುಳೆಯನ್ನು ಅಪಹರಿಸಿರುವ ಘಟನೆ ನಡೆದಿದೆ. ಅಪರಿಚಿತ ಯುವತಿಯೊಬ್ಬಳು ಮಗುವನ್ನು ವೈದ್ಯರ ಬಳಿ ತೋರಿಸಿ ಕೊಡುವುದಾಗಿ ನಾಟಕವಾಡಿ ಪೋಷಕರನ್ನು ಯಾಮಾರಿಸಿ ಮಗುವನ್ನು ಕದ್ದೊಯ್ದಿದ್ದಾಳೆ.ಕೊಳ್ಳೇಗಾಲ ತಾಲೂಕು ಪಾಳ್ಯ ಗ್ರಾಮದ ಗರ್ಭಿಣಿ ಮುತ್ತುರಾಜಮ್ಮ ಕಳೆದ ಆರು ದಿನಗಳ ಹಿಂದೆ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಗಂಡು ಮಗುವಿಗೆ ಜನನ ನೀಡಿದ್ದರು. ಇಂದು ಮಧ್ಯಾಹ್ನ ಮಗುವಿಗೆ ಬೇಧಿ ಆಗಿದ್ದರಿಂದ ಮಗುವಿನ ಅಜ್ಜಿ ರಾಜಮ್ಮ ವೈದ್ಯರ ಬಳಿ ತೋರಿಸಲು ಹೆರಿಗೆ ವಾರ್ಡಿನಿಂದ ಮಗುವನ್ನು ಕರೆದುಕೊಂಡು ಬಂದಿದ್ದಾರೆ.ಬೆಳಗ್ಗೆಯಿಂದ ಹೆರಿಗೆ ವಾರ್ಡಿನಲ್ಲೇ ಇದ್ದ ಯುವತಿ ತನಗೆ ವೈದ್ಯರು ಗೊತ್ತಿರುವುದಾಗಿ ಹೇಳಿ ಅಜ್ಜಿಯ ಜೊತೆ ಬಂದಿದ್ದಾಳೆ. ಮಗುವನ್ನು ತಾನೇ ಎತ್ತಿಕೊಂಡು ಇಲ್ಲಿಯೇ ವೈದ್ಯರು ಇದ್ದಾರೆಯೇ ನೋಡಿಕೊಂಡು ಬರುವಂತೆ ಅಜ್ಜಿಯನ್ನು ಹೊರ ರೋಗಿಗಳ ವಿಭಾಗಕ್ಕೆ ಕಳುಹಿಸಿದ್ದಾಳೆ. ಅಜ್ಜಿ ವೈದ್ಯರನ್ನು ನೋಡಿಕೊಂಡು ಬರುವಷ್ಟರಲ್ಲಿ ಯುವತಿ ಮಗುವಿನೊಂದಿಗೆ ನಾಪತ್ತೆಯಾಗಿದ್ದಾಳೆ.ಆಸ್ಪತ್ರೆಯಿಂದ ಮಗುವಿನ ಸಹಿತ ಹೊರ ಬಂದ ಯುವತಿ ಆಟೋವೊಂದರ ಮೂಲಕ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಸ್ ಹತ್ತಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ವಿಷಯ ತಿಳಿದ ಪಟ್ಟಣ ಠಾಣೆ ಪೊಲೀಸರು, ಆಸ್ಪತ್ರೆಯಲ್ಲಿರುವ ಸಿ.ಸಿ.ಟಿವಿಯನ್ನು ವಶಕ್ಕೆ ಪಡೆದು ಪರಿಶೀಲಿನೆ ನಡೆಸಿದ್ದಾರೆ. ಅಲ್ಲದೆ ಆಸ್ಪತ್ರೆಯ ಹೊರ ಭಾಗದಲ್ಲಿರುವ ಖಾಸಗಿ ಅಂಗಡಿ-ಮುಂಗಟ್ಟುಗಳ ಸಿಸಿಟಿವಿ ಗಳನ್ನು ಸಹ ಪರಿಶೀಲಿಸಿದ್ದಾರೆ.Sign in to your account
Username or Email Address


Password

 Remember Me


