ಕಲಬುರಗಿ: ಗುಲ್ಬರ್ಗ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಜಿಮ್ಸ್)ನಲ್ಲಿ ಕರ್ನಾಟಕದ ಎರಡನೇ 24*7 ಟೆಲಿ ಐಸಿಯು ಸೇವೆಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವಥ್ ನಾರಾಯಣ ಅವರು ಆನ್‍ಲೈನ್ ಮೂಲಕ ಬೆಂಗಳೂರಿನಲ್ಲಿ ಸೋಮವಾರ ಚಾಲನೆ ನೀಡಿದರು.ವಿಕಾಸಸೌಧದಲ್ಲಿ ಆನ್‍ಲೈನ್ ಮೂಲಕ ಜಿಮ್ಸ್ ನ ಟೆಲಿ ಐಸಿಯು ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಸಿಟಿ (ಆಕ್ಷನ್ ಕೊವಿಡ್-19 ಟೀಮ್) ಗ್ರಾಂಟ್ಸ್ ನೆರವಿನೊಂದಿಗೆ ಕರ್ನಾಟಕ ಸರ್ಕಾರ ಜಿಮ್ಸ್ ನಲ್ಲಿ ಕರ್ನಾಟಕದ ಎರಡನೇ 24*7 ಟೆಲಿ ಐಸಿಯು ಸೇವೆ ಆರಂಭಿಸಿದೆ. ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಕ್ಲೌಡ್‍ಫಿಸಿಷಿಯನ್‍ನ ಸೇವೆ ಬಳಸಿಕೊಳ್ಳುವುದರಿಂದ ಗರಿಷ್ಠ ಸಂಖ್ಯೆಯ ರೋಗಿಗಳಿಗೆ ಐಸಿಯು ಚಿಕಿತ್ಸೆ ಸೌಲಭ್ಯ ದೊರೆಯಲು ಸಾಧ್ಯ ಎಂದರು.ರಾಜ್ಯದಲ್ಲಿ ಮೊದಲ ಟೆಲಿ ಐಸಿಯು ಸೌಲಭ್ಯ ಪಡೆದದ್ದು ರಾಮನಗರದ ಜಿಲ್ಲಾ ಆಸ್ಪತ್ರೆ. ಜಿಮ್ಸ್ ಈ ಸೇವೆ ಪಡೆಯುತ್ತಿರುವ ರಾಜ್ಯದ ಎರಡನೇ ಆಸ್ಪತ್ರೆ. ಜಿಮ್ಸ್‍ನ 70 ಹಾಸಿಗೆಗಳ ಪೈಕಿ 26 ಹಾಸಿಗೆಗಳನ್ನು ವಿಶೇಷ ತರಬೇತಿ ಪಡೆದ ತೀವ್ರ ನಿಗಾ ಘಟಕದ ತಜ್ಞರು ಮತ್ತು ದಾದಿಯರನ್ನೊಳಗೊಂಡ 10 ಜನರ ತಂಡ 24*7 ನಿಗಾವಹಿಸಲಿದೆ. ಆರೋಗ್ಯ-ತಂತ್ರಜ್ಞಾನ ವೇದಿಕೆ ಮತ್ತು ಆಸ್ಪತ್ರೆಗಳ ನಡುವೆ ಸಮನ್ವಯತೆ ಸಾಧಿಸಿ ಗುಣಮಟ್ಟದ ಸೇವೆ ಒದಗಿಸಲು ಡಾ.ತ್ರಿಲೋಕ್ ಚಂದ್ರ ನೇತೃತ್ವದಲ್ಲಿ ತಂಡ ಬದ್ಧವಾಗಿದೆ ಎಂದು ಹೇಳಿದರು.ಟೆಲಿ ಐಸಿಯು ನಿರ್ವಹಣೆ:
ತೀವ್ರ ನಿಗಾಘಟಕದ ಇಎಂಆರ್, ಆಡಿಯೊ-ದೃಶ್ಯಗಳು ಮತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ಬಳಸಿಕೊಂಡು ಗಂಭೀರ ಸ್ಥಿತಿಯಲ್ಲಿರುವ ಕೊವಿಡ್ 19 ರೋಗಿಗಳ ಬಗ್ಗೆ ನಿಗಾವಹಿಸುವ ಕ್ಲೌಡ್‍ಫಿಸಿಷಿಯನ್ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡುವರು. ಸಿಸಿಟಿವಿ, ಇಂಟರ್ನೆಟ್ ಸಂಪರ್ಕಿತ ಸೆನ್ಸರ್‍ಗಳ ಮೂಲಕ ರೋಗಿಯ ಸ್ಥಿತಿಗತಿಯ ಬಗ್ಗೆ ರಿಯಲ್ ಟೈಮ್ ಮಾಹಿತಿ ಪಡೆಯುವ ತೀವ್ರ ನಿಗಾ ಘಟಕದ ತಜ್ಞರು ಹಾಗೂ ದಾದಿಯರು, ಈ ಸಂಬಂಧ ಆಸ್ಪತ್ರೆಯ ವೈದ್ಯ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡುವರು. ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ತಗ್ಗಿಸಲು ಈ ವಿಶಿಷ್ಟ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಅಗತ್ಯ ಇರುವ ಕಡೆಗಳಲ್ಲಿ ಟೆಲಿ ಐಸಿಯು ಸೇವೆ ಒದಗಿಸಲು ಎಸಿಟಿ ಬದ್ಧವಾಗಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ, ಸ್ಟಾರ್ಟ್‍ಅಪ್ ವಿಷನ್ ಗ್ರೂಪ್ ಅಧ್ಯಕ್ಷರೂ ಆದ ಎಸಿಟಿ ವಕ್ತಾರ ಪ್ರಶಾಂತ್ ಪ್ರಕಾಶ್, ಕ್ಲೌಡ್‍ಫಿಸಿಷಿಯನ್‍ನ ಸಹ ಸಂಸ್ಥಾಪಕ ಡಾ. ದಿಲೀಪ್ ರಾಮನ್ ಉಪಸ್ಥಿತರಿದ್ದರು.ಏನಿದು ಎಸಿಟಿ ಗ್ರಾಂಟ್ಸ್:
ಕೊವಿಡ್ 19 ವಿರುದ್ಧ ಹೋರಾಟದಲ್ಲಿ ಪ್ರಬಲವಾಗಿ ಪರಿಣಾಮ ಬೀರಬಲ್ಲ ವಿಷಯಗಳ ಬಗ್ಗೆ ವಿಶಿಷ್ಟ ಮಾಹಿತಿ ಒದಗಿಸುವ ಜೊತಗೆ ಅಗತ್ಯ ಸೌಕರ್ಯ ಕಲ್ಪಿಸಲು ನೆರವಾಗುವ ಸ್ಟಾರ್ಟ್‍ಅಪ್ ಸಮೂಹದ 100 ಕೋಟಿ ಅನುದಾನವೇ ಎಸಿಟಿ (ಆಕ್ಷನ್ ಕೊವಿಡ್-19 ಟೀಮ್) ಗ್ರಾಂಟ್ಸ್. ಕೊರೊನಾ ಹರಡದಂತೆ ಎಚ್ಚರವಹಿಸುವ, ಸೋಂಕು ಪತ್ತೆ ಪರೀಕ್ಷೆ ನಡೆಸುವ, ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆಗಳಿಗೆ ಅಗತ್ಯ ಬೆಂಬಲ ಒದಗಿಸಿ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ನಿರ್ವಹಿಸಿ ಮಾನಸಿಕ ಸ್ಥೈರ್ಯ ನೀಡುವ ತಂಡಗಳು ಮತ್ತು ಸ್ಟಾರ್ಟ್‍ಅಪ್‍ಗಳನ್ನು ಎಸಿಟಿ ಬೆಂಬಲಿಸುತ್ತದೆ.






 Advertisement 




Sign in to your account
Username or Email Address


Password

 Remember Me


