ಶಿವಮೊಗ್ಗ: ಲಾಕ್‍ಡೌನ್ ಸಡಿಲಿಕೆಯಾಗಿದೆ ಎಂದ ತಕ್ಷಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿರುವುದು ಅಪಾಯಕಾರಿಯಾಗಿದೆ. ಆದರೆ ಶಿವಮೊಗ್ಗದಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಬಂದರೂ ಮತ್ತೆ ಲಾಕ್‍ಡೌನ್ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಸಿರು ವಲಯದಲ್ಲಿದ್ದ ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಇದೀಗ 30ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗದಲ್ಲಿ ಒಂದು ಪಾಸಿಟಿವ್ ಪ್ರಕರಣ ವರದಿಯಾದರೆ, ಇಡೀ ನಗರದಲ್ಲಿ ಪುನಃ ಲಾಕ್‍ಡೌನ್ ಕಠಿಣಗೊಳ್ಳಲಿದೆ. ಜನರು ಇದನ್ನು ಅರಿತುಕೊಂಡು ಅಗತ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರ ಬರಬೇಕು. ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.ಹೊರ ಜಿಲ್ಲೆಗಳಿಗೆ ತೆರಳಲು ಬಯಸುವವರಿಗೆ ಒನ್ ವೇ ಪಾಸ್ ನೀಡಲಾಗುವುದು. ಇದೇ ರೀತಿ ಬೇರೆ ಕಡೆ ಸಿಲುಕಿರುವವರನ್ನು ಕರೆ ತರಲು ಸಹ ಪಾಸ್ ನೀಡಲಾಗುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತ್ರವಲ್ಲದೆ, ತಾಲೂಕುಗಳಲ್ಲಿ ತಹಶೀಲ್ದಾರ್‍ಗಳು ಸಹ ಪಾಸ್ ನೀಡಲಿದ್ದಾರೆ. ಜನರು ಗೊಂದಲಗೊಳ್ಳುವ ಅಗತ್ಯವಿಲ್ಲ. ಬೇರೆ ಜಿಲ್ಲೆಗಳಿಂದ ಪಾಸ್ ಇಲ್ಲದೆ, ಅನಧಿಕೃತವಾಗಿ ಅಡ್ಡದಾರಿಯಲ್ಲಿ ಜಿಲ್ಲೆ ಪ್ರವೇಶಿಸುವವರ ಮೇಲೆ ಪೊಲೀಸ್ ಕಣ್ಗಾವಲು ಇರಿಸಲಾಗಿದೆ. ಅಂತಹವರ ಮೇಲೆ ಎಫ್‍ಐಆರ್ ದಾಖಲಿಸಿ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ, ಮಾರುಕಟ್ಟೆಯಲ್ಲಿ ಜನಸಂದಣಿಯನ್ನು ತಪ್ಪಿಸಲು ಗಾಂಧಿ ಬಜಾರ್ ಹಾಗೂ ದುರ್ಗಿಗುಡಿ ರಸ್ತೆಗಳಲ್ಲಿ ಒಂದು ಬದಿಯ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗುವುದು. ಗಾಂಧಿ ಬಜಾರ್ ನಂತೆಯೇ ಇಲ್ಲಿಯೂ ಒಂದು ಬದಿಯ ಫಾರ್ಮುಲಾ ಕಲ್ಪಿಸಲಾಗಿದೆ ಎಂದಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಪ್ರಸ್ತುತ ಬೆಳಗ್ಗೆ 7 ರಿಂದ ಸಂಜೆ 7ರ ವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಮದ್ಯದಂಗಡಿಗಳಿಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಮಾತ್ರ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ ಸೆಲೂನ್, ಬ್ಯೂಟಿ ಪಾರ್ಲರ್ ಗಳನ್ನೂ ತೆರೆಯಲು ಅನುಮತಿ ನೀಡಲಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.Sign in to your account
Username or Email Address


Password

 Remember Me


