ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಕೊರೊನಾ ಪ್ರಕರಣ ದೃಢವಾದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಗರದ ಮುಲ್ಲಾ ಓಣಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢವಾಗಿದ್ದರಿಂದ ವಾಣಿಜ್ಯ ನಗರಿಯಲ್ಲಿ ಆತಂಕ ಆವರಿಸಿದೆ.ಲಾಕ್ ಡೌನ್ ಇದ್ದರೂ ಸಾಮಾನ್ಯವಾಗಿ ಹುಬ್ಬಳ್ಳಿ ಮಂದಿ ಓಡಾಡಿಕೊಂಡಿದ್ದರು. ನಮ್ಮಲ್ಲಿ ಸೋಕಿತರು ಇಲ್ಲ ಎಂದು ಬೀಗುತ್ತಿದ್ದರು. ಪೊಲೀಸರು, ಜಿಲ್ಲಾಡಳಿತ ಎಷ್ಟು ಹೇಳಿದರೂ ಕೊರೊನಾ ಭಯವಿಲ್ಲದೇ ರಸ್ತೆಗಿಳಿಯುತ್ತಿದ್ದರು. ಲಾಕ್ ಡೌನ್ ಪಾಲಿಸದವರಿಗೆ ಈಗ ಬರಸಿಡಿಲು ಬಡಿದಂತಾಗಿದೆ. ಜಿಲ್ಲೆಯ 2ನೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಶೇ.80ರಷ್ಟು ಹುಬ್ಬಳ್ಳಿಯೇ ಡೇಂಜರ್ ಝೋನ್ ಆಗಿದೆ.2 ವಾರಗಳ ಹಿಂದೆ ಹೊಸ ಯಲ್ಲಾಪುರದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. 3 ದಿನಗಳ ಹಿಂದೆಯಷ್ಟೇ ಆತ ಗುಣಮುಖರಾಗಿದ್ದರಿಂದ ಧಾರವಾಡ ಜನರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.ಸೋಂಕಿತನಿಗೆ ದೆಹಲಿ ನಂಟು ಇದ್ದು, ಆತನ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 16 ಜನರಿಗೆ ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ಇನ್ನೂ ಸೋಂಕಿತನ ಸಹೋದರನ ವರದಿ ಬರಬೇಕಿದೆ. ಈತ ಹಾಗೂ ಈತನ ಸಹೋದರ ದೆಹಲಿ, ಆಗ್ರಾ, ಮುಂಬೈ ಸುತ್ತಾಡಿದ್ದಾರೆ. ಫುಟ್ ವೇರ್ ಬಿಸಿನೆಸ್ ಟೂರ್ ಮೇಲೆ ಹಲವು ಕಡೆ ಸುತ್ತಾಡಿರುವದು ಸಾಕಷ್ಟು ಆತಂಕವನ್ನುಂಟು ಮಾಡಿದೆ.ಸೋಂಕಿತ ಪ್ರದೇಶ ಮುಲ್ಲಾ ಓಣಿಯಿಂದ 3 ಕಿ.ಮೀ. ಸುತ್ತಳತೆಯ ಪ್ರದೇಶಗಳು ಕಂಟೈನ್ಮೆಂಟ್ ನಿರ್ಮಾಣ ಮಾಡಲಾಗಿದೆ. ಇದು ಹುಬ್ಬಳ್ಳಿ ಶೇ.80 ರಷ್ಟು ನಗರವನ್ನು ಒಳಗೊಂಡಿದೆ. ಸುಮಾರು 1,01,769 ಮನೆಗಳು ಹಾಗೂ 5,71,153 ಜನಸಂಖ್ಯೆ ಕಂಟೈನ್ಮೆಂಟ್ ಗೆ ಒಳಪಡುತ್ತವೆ. ಹೀಗಾಗಿ ಹು-ಧಾ ಮಹಾನಗರ ಪಾಲಿಕೆಯ 7 ವಲಯ ಕಚೇರಿಗಳು ಹಾಗೂ 36 ವಾರ್ಡ್ ಸೇರಿ 500ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಹೈ ಅಲರ್ಟ್ ವ್ಯಾಪ್ತಿಗೆ ಬರುತ್ತವೆ.ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ: ಕಂಟೈನ್ಮೆಂಟ್ ವಲಯದಲ್ಲಿ ಮುಂದಿನ ಆದೇಶದವರೆಗೆ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ ಕಾರ್ಯ ಮುಂದುವರಿದಿದೆ. ಮೊದಲು 3 ಕಿ.ಮೀ. ಸುತ್ತಳತೆಯ ಪ್ರದೇಶಕ್ಕೆ ಪಾಲಿಕೆ ಆದ್ಯತೆ ನೀಡಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಜನರ ಓಡಾಟ ಸ್ತಬ್ಧವಾಗಿದೆ. ಕರ್ತವ್ಯ ನಿರತ ಹಾಗೂ ಸರಕು ಸಾಗಾಣಿಕೆ ವಾಹಗಳನ್ನು ಹೊರತು ಪಡಿಸಿ ಉಳಿದೆಲ್ಲ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. 3 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆಯವರು ಆಹಾರ ಮತ್ತು ಇತರೇ ವಸ್ತುಗಳನ್ನು ವಿತರಿಸುವಂತಿಲ್ಲ. ಹೀಗಾಗಿ ಇಂದಿನಿಂದ ವಾಣಿಜ್ಯ ನಗರಿಯಲ್ಲಿ ಲಾಕ್ ಡೌನ್ ಮತ್ತಷ್ಟು ಕಠಿಣವಾಗಿದೆ.Sign in to your account
Username or Email Address


Password

 Remember Me


