ಚಿಕ್ಕಮಗಳೂರು: ನನ್ನ ಕಾರಿಗೆ ಅಪಘಾತ ಮಾಡಿದ್ದು ಪೊಲೀಸ್ ಜೀಪ್, ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಜೀಪ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ಸೋಮವಾರ ನಗರದ ಗ್ರಾಮಾಂತರ ಠಾಣೆಯ ರಕ್ಷಾ ಪೊಲೀಸ್ ಜೀಪ್ ಡ್ರೈವರ್ ಜೀಪನ್ನ ನಿಲ್ಲಿಸಿ ಮೆಡಿಕಲ್ ಗೆ ಹೋಗಿ ಬರುವಷ್ಟರಲ್ಲಿ ಕಳ್ಳನೋರ್ವ ಜೀಪನ್ನು ಕದ್ದು ಪರಾರಿಯಾಗಿದ್ದ. ನಗರದಿಂದ ಐದು ಕಿ.ಮೀ. ದೂರ ಜೀಪನ್ನು ತೆಗೆದುಕೊಂಡು ಹೋಗಿ ಆಲ್ಟೋ ಕಾರಿಗೆ ಅಪಘಾತ ಮಾಡಿದ್ದ. ಹಿಂದೆ ಪೊಲೀಸರು ಫಾಲೋ ಮಾಡುತ್ತಿರುವುದನ್ನು ಗಮನಿಸಿ ಜೀಪನ್ನು ಅಲ್ಲೆ ಬಿಟ್ಟು ಕಾಡಿನೊಳಗೆ ಕಣ್ಮರೆಯಾಗಿದ್ದ.ಈಗ ಆಲ್ಟೋ ಕಾರಿನ ಮಾಲೀಕ ಸಖರಾಯಪಟ್ಟಣದ ಗುರುಮೂರ್ತಿ ಗ್ರಾಮಾಂತರ ಠಾಣೆಯಲ್ಲಿ ಪೊಲೀಸ್ ಜೀಪ್ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನ ಕಾರಿಗೆ ಪೊಲೀಸ್ ಜೀಪ್ ಗುದ್ದಿದೆ. ಡ್ರೈವರ್ ಯಾರೆಂದು ಗೊತ್ತಿಲ್ಲ. ಹಾಗಾಗಿ ಪೊಲೀಸ್ ಜೀಪ್ ವಿರುದ್ಧ ಸೂಕ್ತ ಕ್ರಮಕ್ಕೆ ಮನವಿ ಮಾಡಿಕೊಂಡಿದ್ದಾರೆ.ಅತ್ತ ಪೊಲೀಸ್ ಜೀಪ್ ಕದ್ದ ಯಾರೆಂದು ಪೊಲೀಸರಿಗೂ ಗೊತ್ತಿಲ್ಲ. ಇತ್ತ ಜೀಪ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ಬಂದಿದೆ. ಪೊಲೀಸರಿಗೆ ಈಗ ಏನು ಮಾಡುವುದು ಎಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ.Sign in to your account
Username or Email Address


Password

 Remember Me


