ಮಂಗಳೂರು: ಹೊಸ ವರ್ಷಾಚರಣೆಗೆ ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದ್ದು, ಕಡಲನಗರಿ ಮಂಗಳೂರಿನಲ್ಲಿಯೂ ನ್ಯೂ ಇಯರ್ ಸೆಲಬ್ರೇಷನ್‍ಗೆ ಹೋಟೆಲ್, ರೆಸ್ಟೋರೆಂಟ್, ಕ್ಲಬ್‍ಗಳು ಸಿದ್ಧತೆ ಮಾಡಿಕೊಂಡಿದೆ.ಆದರೆ ಮಂಗಳೂರು ನಗರ ಪೊಲೀಸರು ಒಂದಿಷ್ಟು ಕಠಿಣ ಸೂಚನೆಯನ್ನು ಆಯೋಜಕರಿಗೆ ನೀಡಿದ್ದಾರೆ. ಸಂಜೆ ಆರು ಗಂಟೆಯಿಂದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಆರಂಭಿಸಬಹುದಾಗಿದ್ದು, ರಾತ್ರಿ 12 ಗಂಟೆ 5 ನಿಮಿಷಕ್ಕೆ ಮಾತ್ರ ವರ್ಷಾಚರಣೆ ಮಾಡಲು ಅವಕಾಶ. ಆ ನಂತರ ಕಾರ್ಯಕ್ರಮವನ್ನು ಬಂದ್ ಮಾಡಬೇಕು. ಬಳಿಕ 15 ನಿಮಿಷದಲ್ಲಿ ಅಂದರೆ 12:20ಕ್ಕೆ ಕಾರ್ಯಕ್ರಮ ಆಯೋಜಕರು ಸಂಪೂರ್ಣವಾಗಿ ತೆರವು ಮಾಡಬೇಕೆಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಖಡಕ್ ಸೂಚನೆ ನೀಡಿದ್ದಾರೆ.ಪೊಲೀಸರು ಸೂಚಿಸಿರುವ ನಿಯಮ ತಪ್ಪಿದರೆ ಮುಲಾಜಿಲ್ಲದೆ ಪೊಲೀಸ್ ಕ್ರಮ ಕೈಗೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಪಾರ್ಟಿ ನೆಪದಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸಿದರೆ ಹುಷಾರ್ ಎಂದಿರುವ ಕಮಿಷನರ್, ಮಂಗಳೂರಿನ ಎಲ್ಲಾ ಪಾರ್ಟಿಗಳಿಗೆ ಮಹಿಳಾ ಸುರಕ್ಷಾ ಸಿಬ್ಬಂದಿಯನ್ನು ನೇಮಿಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ.ಮಫ್ತಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಲಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸರು ಭದ್ರತೆ ನೀಡಲಿದ್ದಾರೆ. ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ, ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ.ಹಾಗೆಯೇ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿರುವುದರಿಂದ ಪೊಲೀಸ್ ಇಲಾಖೆ ಈ ಬಾರಿಯ ಹೊಸ ವರ್ಷ ಆಚರಣೆಗೆ ಹದ್ದಿನ ಕಣ್ಣು ಇಟ್ಟಿದ್ದಾರೆ.Sign in to your account
Username or Email Address


Password

 Remember Me


