ರಾಮನಗರ: ಬೆಳ್ಳಂಬೆಳಗ್ಗೆ ವಾಕಿಂಗ್ ಗೆ ತೆರಳಿದ್ದ ಯುವಕನ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ನಡೆದಿದೆ.ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಗ್ರಾಮದ ನಿವಾಸಿ ಚೇತನ್ ಕುಮಾರ್(25) ಮೃತ ದುರ್ದೈವಿ. ದಿನನಿತ್ಯ ಚೇತನ್‍ಗೆ ಬೆಳಗ್ಗೆ ವಾಕಿಂಗ್, ಜಾಗಿಂಗ್ ಮಾಡುವ ಅಭ್ಯಾಸವಿತ್ತು. ಹೀಗಾಗಿ ಎಂದಿನಂತೆ ಇಂದು ಕೂಡ ಚೇತನ್ ಬೆಳ್ಳಂ ಬೆಳಗ್ಗೆ ವಾಕಿಂಗ್ ಮಾಡಲೆಂದು ತೆರಳಿದ್ದನು. ಆದರೆ ನಾರಾಯಣಪುರ ಸಮೀಪದ ಅಂಕಚಾರಿ ದೊಡ್ಡಿಯ ಬಳಿ ಚೇತನ್ ಬರುತ್ತಿದ್ದಂತೆ ಮಾವಿನ ತೋಪಿನಲ್ಲಿದ್ದ ಆನೆ ಆತನ ಮೇಲೆ ದಾಳಿ ನಡೆಸಿದ್ದು, ಆತನನ್ನ ಸೊಂಡಿಲಿನಲ್ಲಿ ಸುತ್ತಿ ಹಿಡಿದು ನೆಲಕ್ಕೆ ಬಡಿದು ಕೊಂದು ಹಾಕಿದೆ. ಈ ವೇಳೆ ದಾರಿಯಲ್ಲಿ ಇದ್ದ ಕೆಲವರು ಜೋರಾಗಿ ಶಬ್ದ ಮಾಡಿದ್ದರಿಂದ ಶವವನ್ನು ಅಲ್ಲೇ ಬಿಟ್ಟು ಆನೆ ಓಡಿಹೋಗಿದೆ.ಘಟನೆ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲು ಮುಂದಾಗಿದ್ದರು. ಆದರೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕಬ್ಬಾಳು ಅರಣ್ಯ ಪ್ರದೇಶ, ತೆಂಗಿನಕಲ್ಲು ಅರಣ್ಯ ಪ್ರದೇಶ, ಕೋಡಿಹಳ್ಳಿ ಅರಣ್ಯ ಪ್ರದೇಶಗಳಿಂದ ಕಾಡಾನೆಗಳು ಬಂದು ರೈತರ ಬೆಳೆ ಹಾನಿ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಇದೀಗ ಯುವಕನ ಮೇಲೆ ದಾಳಿ ನಡೆಸಿ ಆನೆಗಳು ಕೊಂದು ಹಾಕಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


