ಕೊಪ್ಪಳ: ರೈತರಿಗೆ ಆರ್ಥಿಕ ಸಹಕಾರಿಯಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶೇರುದಾರರ ಪೈಕಿ ಶೇ.90ರಷ್ಟು ಸದಸ್ಯರನ್ನ ಅನರ್ಹಗೊಳಿಸಿ, ಅರ್ಹತೆ ಪಟ್ಟಿ ಸಿದ್ದಪಡಿಸಿ ಚುನಾವಣೆ ನಡೆಸಲು ಸಂಘ ಮುಂದಾಗಿದೆ. ಈ ಹಿನ್ನೆಲೆ ಇಡೀ ಗ್ರಾಮಸ್ಥರು ಸಹಕಾರಿ ಸಂಘದ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳದ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ನಡೆದಿದೆ.ಗುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಈ ಸಂಘದಲ್ಲಿ ಗುಂಡೂರು, ಗುಂಡೂರು ಕ್ಯಾಂಪ್, ಕಾಮಗುಂಡಮ್ಮ ಕ್ಯಾಂಪ್, ತಿಮ್ಮರೇಶ ಕ್ಯಾಂಪ್ ಹಾಗೂ ಲಕ್ಷ್ಮೀ ಕ್ಯಾಂಪ್‍ನ ಸುಮಾರು 1,289 ರೈತ ಸದಸ್ಯರು ಶೇರು ಹೊಂದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತದಾನ ಮಾಡಲು ಶೇ 10ರಷ್ಟು ಜನರಿಗೆ ಮಾತ್ರ ಅರ್ಹರು ಎನ್ನುವ ಪಟ್ಟಿಯನ್ನು ಸಂಘ ಬಹಿರಂಗ ಪಡಿಸಿದೆ. ಈ ಹಿನ್ನೆಲೆ ಕ್ಯಾಂಪ್ ಮತ್ತು ಗ್ರಾಮಗಳ ಎಲ್ಲಾ ರೈತ ಶೇರುದಾರರು ಹೋರಾಟ ನಡೆಸಿ, ಸಂಘದಲ್ಲಿ ರಾಜಕೀಯ ನುಸುಳಿ, ಕುತಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.ಸೊಸೈಟಿಯ ಚುನಾವಣೆ ಪ್ರಾರಂಭವಾಗುತ್ತದೆ ಎನ್ನುವ ಮುನ್ಸೂಚನೆ ಅರಿತಿದ್ದ ಗ್ರಾಮಸ್ಥರಿಗೆ ಅಸಲಿ ವಿಷಯ ತಿಳಿದಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ನಿಗದಿತ ವೇಳೆ ಪ್ರಾರಂಭವಾಗುತ್ತಿದ್ದಂತೆ ಅರ್ಹತೆ, ಅರ್ನಹತೆ ಬಗ್ಗೆ ಸಂಘದ ನೋಟಿಸ್ ಬೋರ್ಡಿನಲ್ಲಿ ಬಹಿರಂಗಗೊಂಡಿದ್ದರಿಂದ ಸೊಸೈಟಿ ಮುಂದೆ ನೂರಾರು ರೈತರು ಜಮಾಗೊಂಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಮತದಾನದ ಹಕ್ಕು ಕಳೆದುಕೊಂಡ ನೂರಾರು ರೈತರು ರಸ್ತೆ ಮಧ್ಯದಲ್ಲಿಯೇ ಕುಳಿತುಕೊಂಡು ಪ್ರತಿಭಟನೆ ನಡೆಸಿದರು. ರೈತರಿಗೆ ಸಹಾಯ, ಸಹಕಾರಕ್ಕೆ ಅನುಕೂಲವಾಗಬೇಕಾಗಿದ್ದ ಸೊಸೈಟಿಯಲ್ಲಿ ರಾಜಕೀಯ ನುಸುಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಇಡೀ ಚುನಾವಣೆ ಪ್ರಕ್ರಿಯೆ ಬಹಿಷ್ಕರಿಸಲು ತೀರ್ಮಾನಿಸಿದರು. ಜೊತೆಗೆ ಸೊಸೈಟಿ ಕೇವಲ ವ್ಯವಸ್ಥಿತ ಗುಂಪಿನ ಕಪಿಮುಷ್ಠಿಯೊಳಗೆ ಸೇರುವ ಹುನ್ನಾರವಿದು ಎಂದು ಆತಂಕ ವ್ಯಕ್ತಪಡಿಸಿದರು. ಚುನಾವಣೆ ಪ್ರಕ್ರಿಯೆಯನ್ನು ರದ್ದು ಪಡಿಸಬೇಕು, ಸೊಸೈಟಿಯವರ ಕುತಂತ್ರದಿಂದ ಸಿದ್ಧಪಡಿಸಿದ ಅವೈಜ್ಞಾನಿಕ ಪ್ರಕಟಣೆಯನ್ನು ಸಂಪೂರ್ಣ ರದ್ದುಗೊಳಿಸಿ ಹೊಸ ಪಟ್ಟಿ ತಯಾರು ಮಾಡಿ. ಎಲ್ಲ ರೈತರಿಗೆ ತಮ್ಮ ಹಕ್ಕು ಚಲಾಯಿಸುವಂತೆ ಅವಕಾಶ ಕೊಡಿ ಎಂದು ಒತ್ತಾಯಿಸಿ ಸಹಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಜಿಲ್ಲಾಧಿಕಾರಿಗಳ ಬಳಿ ಗ್ರಾಮಸ್ಥರ ನಿಯೋಗ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೂ ಮುನ್ನ ಸಾಲಗಾರರು ಮತ್ತು ಸಾಲಗಾರರಲ್ಲದವರ ಪಟ್ಟಿ ಮಾಡಲಾಗಿದೆ. ಒಟ್ಟು 1,289 ಶೇರುದಾರ ಮತದಾರರು ಇದ್ದಾರೆ. ಅದರಲ್ಲಿ 864 ಜನ ಸಾಲಗಾರರಲ್ಲದ ಕ್ಷೇತ್ರದ ಮತದಾರರು. 485 ಜನರು ಸಾಲಗಾರರ ಕ್ಷೇತ್ರದ ಮತದಾರರು. ಒಟ್ಟು 1,289 ಮತದಾರರು ಈ ಸೊಸೈಟಿಯ ವ್ಯವಹಾರಕ್ಕೆ ಒಳಪಟ್ಟವರಾಗಿದ್ದಾರೆ. ಆದರೆ ಸೊಸೈಟಿ ಆಡಳಿತ ಮಂಡಳಿ ಕೇವಲ 111 ಜನರನ್ನು ಮಾತ್ರ ಚುನಾವಣೆಗೆ ಅರ್ಹರು ಎಂದು ಅಂತಿಮ ಪಟ್ಟಿ ಸಿದ್ಧಪಡಿಸಿದೆ. ಇದರಲ್ಲಿ ಸಾಲಗಾರರ ಕ್ಷೇತ್ರದ 85 ಮತದಾರರು ಮತ್ತು ಸಾಲಗಾರರಲ್ಲದ 26 ಮಂದಿಯನ್ನು ಸೇರಿಸಿ ಒಟ್ಟು 111 ಜನರನ್ನು ಮಾತ್ರ ಚುನಾವಣೆ ಸ್ಪರ್ಧಿಸಲು ಮತ್ತು ಮತದಾನ ಮಾಡಲು ಸಹಕಾರಿ ಕಾಯ್ದೆ ಅಡಿಯಲ್ಲಿ ಅರ್ಹರನ್ನಾಗಿ ಮಾಡಿದ್ದಾರೆ. ಈ ಗೊಂದಲದ ಹಿನ್ನೆಲೆ ಚುನಾವಣೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.ಇದರಿಂದಾಗ 1,178 ರೈತರು ಎಲ್ಲಾ ಅರ್ಹತೆ ಹಕ್ಕು ಕಳೆದುಕೊಂಡಿದ್ದ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊಸೈಟಿಯ ಈ ನಡೆಯನ್ನು ಖಂಡಿಸಿ ಗ್ರಾಮಸ್ಥರೆಲ್ಲರೂ ಚುನಾವಣೆ ಬಹಿಷ್ಕರಿಸಲು ಸಿದ್ಧರಾಗಿದ್ದಾರೆ. ಸೊಸೈಟಿಯ ಆಡಳಿತ ಮಂಡಳಿ ತಮಗೆ ಬೇಕಾದವರಿಗೆ ಮಾತ್ರ ಅರ್ಹತೆ ನೀಡಿ ಸರ್ಕಾರದ ನೀತಿ ನಿಯಮಾವಳಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಐದು ವರ್ಷದಲ್ಲಿ ನಮಗೆ ಸಾಮಾನ್ಯ ಸಭೆ ಕುರಿತಾಗಿ ಒಂದು ದಿನವೂ ಸರಿಯಾದ ಮಾಹಿತಿ ನೀಡದೆ ನಮ್ಮನ್ನು ದಾರಿ ತಪ್ಪಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.Sign in to your account
Username or Email Address


Password

 Remember Me


