ಬೆಂಗಳೂರು: ಮನೆಯಲ್ಲಿದ್ದ ರೌಡಿಶೀಟರ್ ಓರ್ವನನ್ನು ಮಾತುಕತೆಗೆ ಕರೆದೊಯ್ದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೆಜಿ ಹಳ್ಳಿಯ ಗೋವಿಂದ ನಗರದಲ್ಲಿ ನಡೆದಿದೆ.ಸಲೀಂ ಅಲಿಯಾಸ್ ಶಾಹಿದ್ ಹತ್ಯೆಯಾದ ರೌಡಿಶೀಟರ್. ಮೂಲತಃ ತಮಿಳುನಾಡಿನವನಾದ ಶಾಹಿದ್ ತಾಯಿಯೊಂದಿಗೆ ಬೆಂಗಳೂರಿನ ಗೋವಿಂದ ನಗರದಲ್ಲಿ ವಾಸವಿದ್ದ. ಶಾಹಿದ್ ಮನೆಯಲ್ಲಿದ್ದಾಗ ಮೂರು ಜನ ಸ್ನೇಹಿತರು ಬಂದು ಮಾತುಕತೆಗೆಂದು ಹೊರಗೆ ಕರೆದೊಯ್ದಿದ್ದರು. ಬಳಿಕ ಗೋವಿಂದನಗರದ ರೇಲ್ವೆ ಗೇಟ್ ಬಳಿ ರೌಡಿ ಶೀಟರ್ ಶಾಹಿದ್‍ನನ್ನು ಬರ್ಬರವಾಗಿ ಹತ್ಯೆ ಗೈದು ಪರಾರಿಯಾಗಿದ್ದಾರೆ.ಶಾಹಿದ್ ತಾಯಿಗೆ ನಾಲ್ವರು ಮಕ್ಕಳಿದ್ದು ಎಲ್ಲರು ಚೆನ್ನೈನಲ್ಲಿ ವಾಸವಿದ್ದಾರೆ. ಹೀಗಾಗಿ ಅವರು ಶಾಹಿದ್ ಜೊತೆಗೆ ವಾಸವಿದ್ದರು. ಶಾಹಿದ್‍ನನ್ನು ಇಂದು ಮಧ್ಯಾಹ್ನ ಕರೆದುಕೊಂಡು ಹೋಗಿದ್ದ ಸ್ನೇಹಿತರು ಹೆಚ್ಚು ಆತ್ಮೀಯರಾಗಿದ್ದರು. ಆಗಾಗ ಮನೆಗೆ ಬರುತ್ತಿದ್ದರು. ಆದರೆ ಅವರು ಕರೆದುಕೊಂಡು ಹೋದ ಮೇಲೆ ಏನು ನಡೆಯಿತು ಅಂತ ನಮಗೆ ಗೊತ್ತಾಗಿಲ್ಲ. ಅವರನ್ನು ಬಂಧಿಸಿದರೆ ಯಾರು, ಯಾಕೆ ಕೊಲೆ ಮಾಡಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಸ್ಥಳೀಯ ನಿವಾಸಿ ವಸೀಂ ಹೇಳಿದ್ದಾರೆ.ಕೊಲೆಯಾದ ಶಾಹಿದ್ ತಾಯಿ ಹೇಳಿಕೆ ದಾಖಲಿಸಿಕೊಂಡಿರುವ ಕೆಜಿಹಳ್ಳಿ ಪೊಲೀಸರು, ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಳೇ ವೈಷಮ್ಯಕ್ಕೆ ಕೊಲೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


