ಕೋಲಾರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರನ ಜೊತೆಗೂಡಿ ಹತ್ಯೆ ಮಾಡಿರುವ ಘಟನೆ ಕೋಲಾರದ ಮುಳಬಾಗಲಿನ ಅಲ್ಲಾಲಸಂದ್ರದ ಬಳಿ ನಡೆದಿದೆ.ನಾರಾಯಣರೆಡ್ಡಿ ಮೃತ ದುರ್ದೈವಿ. ಈತ ಹೋಂಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಪತ್ನಿ ಭಾಗ್ಯಲಕ್ಷ್ಮಿ ಮತ್ತು ಪ್ರಿಯಕರ ನಾಗರಾಜ್ ಸೇರಿ ನಾರಾಯಣ ರೆಡ್ಡಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಏನಿದು ಪ್ರಕರಣ?
ಬುಧವಾರ ಮಧ್ಯಾಹ್ನ ಮುಳಬಾಗಲು ತಾಲೂಕಿನ ಅಲ್ಲಾಲಸಂದ್ರ ಗೇಟ್ ಬಳಿ ಅಪರಿಚಿತ ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮುಳಬಾಗಲು ಗ್ರಾಮಾಂತರ ಪೊಲೀಸರಿಗೆ ಅದೊಂದು ಕೊಲೆ ಎಂಬ ಅನುಮಾನ ಮೂಡಿತ್ತು. ಸ್ಥಳಕ್ಕೆ ಕೋಲಾರ ಎಸ್‍ಪಿ ರೋಹಿಣಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ವಿಶೇಷ ತಂಡ ರಚನೆ ಮಾಡಿ ಕೊಲೆಯದವನ ಗುರುತು ಹಾಗೂ ಕೊಲೆ ಆರೋಪಿಗಳಿಗೆ ಬಲೆ ಬೀಸಿದ್ದರು.ಮುಳಬಾಗಲು ತಾಲೂಕಿನ ನಡಂಪಲ್ಲಿ ಗ್ರಾಮದ ಹೋಂ ಗಾರ್ಡ್ ನಾರಾಯಣರೆಡ್ಡಿ (38) ಎಂದು ಪತ್ತೆ ಹಚ್ಚಲಾಗಿತ್ತು. ಅದಾದ ಬಳಿಕ ಪೊಲೀಸರು ಸಂಬಂಧಿಕರನ್ನ ವಿಚಾರಣೆಗೊಳಪಡಿಸಿದ ವೇಳೆ ಪತ್ನಿ ಭಾಗ್ಯಲಕ್ಷ್ಮಿ ತನ್ನ ಪ್ರಿಯಕರ ನಾಗರಾಜ್‍ನೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ನಂತರ ಈ ಕುರಿತು ಪೊಲೀಸರ ವಿಚಾರಣೆ ಮಾಡುವಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.ಹೋಂ ಗಾರ್ಡ್ ಕೆಲಸ ಮಾಡಿಕೊಂಡಿದ್ದ ನಾರಾಯಣರೆಡ್ಡಿಗೆ ಒಂದು ಗಂಡು ಮಗುವಿದೆ. 10 ವರ್ಷಗಳ ಹಿಂದೆ ಗುರು-ಹಿರಿಯರೆಲ್ಲ ಸೇರಿ ತಾಲೂಕಿನ ವಡ್ಡಹಳ್ಳಿಯ ಭಾಗ್ಯಲಕ್ಷ್ಮಿಯನ್ನ ಮದುವೆ ಮಾಡಿದ್ದರು. ಮೊದಲಿನಿಂದಲೂ ನಡಂಪಲ್ಲಿ ಪಕ್ಕದ ಗ್ರಾಮದ ಯಲುವಳ್ಳಿಯ ನಾಗರಾಜ್‍ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಭಾಗ್ಯಲಕ್ಷ್ಮಿ ಈ ಹಿಂದೆ ಗಂಡನೊಂದಿಗೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದಳು. ಆದರೆ ನ್ಯಾಯ ಪಂಚಾಯತಿ ಮಾಡಿ ವಾಪಸ್ ಕರೆಸಿಕೊಳ್ಳಲಾಗಿತ್ತು.ಭಾಗ್ಯಲಕ್ಷ್ಮಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂದು ಮೊದಲಿಗೆ ಅತ್ತೆ ಮಾವನನ್ನ ಮನೆಯಿಂದ ಹೊರ ಹಾಕಿದ್ದಳು. ನಂತರ ಕಳೆದ ಒಂದು ತಿಂಗಳಿನಿಂದ ಪ್ರಿಯಕರ ನಾಗರಾಜ್ ಜೊತೆಗೆ ಸೇರಿ ಗಂಡನನ್ನ ಮುಗಿಸುವ ಸ್ಕೆಚ್ ಹಾಕಿ ಬುಧವಾರ ಅಲ್ಲಾಲಸಂದ್ರ ಬಳಿ ಕತ್ತು ಹಿಸುಕಿ ಕೊಲೆ ಮಾಡಿ, ಸಾಕ್ಷಿ ಸಿಗಬಾರದೆಂದು ಬೈಕ್‍ನಲ್ಲಿನ ಪೆಟ್ರೋಲ್ ಸುರಿದು ಬಿಸಾಡಿ ಪರಾರಿಯಾಗಿದ್ದರು. ಮೊದಲಿನಿಂದಲೂ ಭಾಗ್ಯಲಕ್ಷ್ಮಿ ಹಾಗೂ ನಾಗರಾಜ್ ಅಕ್ರಮ ಸಂಬಂಧ ಗೊತ್ತಿದ್ದರಿಂದ ಕುಟುಂಬ ಸದಸ್ಯರು ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ವಿಚಾರಣೆಗೊಳಪಡಿಸಿದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರೋಹಿಣಿ ಕಟೋಜ್ ಹೇಳಿದ್ದಾರೆ.Sign in to your account
Username or Email Address


Password

 Remember Me


