ಬಾಗಲಕೋಟೆ: ಲೋಕಸಮರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಪ್ರಚಂಡ ಗೆಲುವು ಸಾಧಿಸಿದ ಬೆನ್ನಲ್ಲೇ ಬಾಗಲಕೋಟೆಯ ಕ್ಷೌರಿಕರೊಬ್ಬರು ಉಚಿತವಾಗಿ ಗ್ರಾಹಕರಿಗೆ ಕಟಿಂಗ್, ಶೇವಿಂಗ್ ಮಾಡುವುದರ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.ನಗರದ ಲಕ್ಕಿ ಹೇರ್ ಕಟಿಂಗ್ ಸೆಲೂನ್ ಮಾಲೀಕ ಸುನೀಲ್ ಶಹಪೂರ್ ಹಾಗೂ ಸಹೋದರರ ತಂಡ ಉಚಿತವಾಗಿ ಕಟಿಂಗ್, ಶೇವಿಂಗ್ ಮಾಡುವುದರ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಶಹಪೂರ್ ಬ್ರದರ್ಸ್, ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಉಚಿತ ಕಟಿಂಗ್, ಶೇವಿಂಗ್ ಮಾಡುವುದಾಗಿ ತಮ್ಮ ಅಂಗಡಿಯ ಮುಂದೆ ಬ್ಯಾನರ್ ಕೂಡ ಹಾಕಿದ್ದಾರೆ.ಮೋದಿ ಹಾಗೂ ಬಿಜೆಪಿ ಪಕ್ಷ ದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸುನೀಲ್ ಶಹಪೂರ್ ಈ ರೀತಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಶಹಪೂರ್ ಅವರ ಈ ಅಭಿಮಾನದ ಕಾರ್ಯ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಬೆಳಗ್ಗೆಯಿಂದಲೇ ಗ್ರಾಹಕರು ಉಚಿತ ಕ್ಷೌರ ಮಾಡಿಕೊಳ್ಳಲು ಮುಗಿ ಬಿದ್ದಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 349 ಸ್ಥಾನ ಗಳಿಸಿದ್ದರೆ, ಯುಪಿಎ 82 ಹಾಗೂ ಇತರೇ 111 ಸ್ಥಾನವನ್ನು ಗೆದ್ದಿದೆ. ಹಾಗೆಯೇ ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ 25 ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದೆ. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅದರಲ್ಲಿ ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.Sign in to your account
Username or Email Address


Password

 Remember Me


