ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಬಿಜೆಪಿ ಕಾರ್ಯಕರ್ತರು ಮತಗಟ್ಟೆಗೆ ಪೂಜೆ ಸಲ್ಲಿಸಿದ್ದಾರೆ.ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಪರವಾಗಿ ಪೂಜೆ ಸಲ್ಲಿಸಿದ್ದಾರೆ. ಅದರಗುಂಚಿ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 65ಕ್ಕೆ ಪೂಜೆ ಮಾಡಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಆಶಿಸಿದ್ದಾರೆ. ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ, ತೋರಣದ ರೀತಿಯಲ್ಲಿ ಹೂವಿನ ಮಾಲೆ ಹಾಕಿ, ಬಳಿಕ ಹೊಸಲಿನ ಬಳಿ ತೆಂಗಿನಕಾಯಿ ಒಡೆದು ಪೂಜೆ ಮಾಡಲಾಗಿದೆ. ಅಲ್ಲದೆ ಮತಗಟ್ಟೆಯಲ್ಲಿದ್ದ ಮತ ಯಂತ್ರಕ್ಕೂ ಕೂಡ ಆರತಿ ಬೆಳಗಿ ಕಾರ್ಯಕರ್ತರು ಪೂಜೆ ಮಾಡಿದ್ದಾರೆ.ಇಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಚುನಾವಣೆ ಜೊತೆಗೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತದಾನ ನಡೆಯುತ್ತಿದೆ. ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ, ಉಮೇಶ್ ಜಾಧವ್ ರಾಜೀನಾಮೆಯಿಂದ ಖಾಲಿಯಾದ ಚಿಂಚೋಳಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ ಸೇರಿದಂತೆ 8 ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಸೂಕ್ಷ್ಮ 33 ಹಾಗೂ ಅತಿ ಸೂಕ್ಷ್ಮ 38 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ.ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಸೇರಿದಂತೆ ಒಟ್ಟು 17 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 241 ಮತಗಟ್ಟೆಗಳಿದ್ದು, ಅವುಗಳಲ್ಲಿ 60 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 181 ಸಾಮಾನ್ಯ ಮತಗಟ್ಟೆಗಳಿವೆ.Sign in to your account
Username or Email Address


Password

 Remember Me


