ಬೆಂಗಳೂರು: ಉಕ್ಕಿನ ಮಹಿಳೆ ಖ್ಯಾತಿಯ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ಅವರು ತಮ್ಮ ಅವಳಿ ಮಕ್ಕಳ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.ಇರೋಮ್ ಶರ್ಮಿಳಾ ಅವರು ಅವಳಿ ಹೆಣ್ಣು ಮಕ್ಕಳನ್ನು ಎತ್ತಿ ಮುದ್ದಾಡಿದ್ದಾರೆ. ಆ ಮಕ್ಕಳಿಗೆ ನಿಕ್ಸ್ ಶಖಿ ಮತ್ತು ಆಟುಮನ್ ಎಂದು ನಾಮಕರಣ ಮಾಡಿದ್ದಾರೆ. ನಿಕ್ಸ್ ಶಖಿ 2.16 ಕೆಜಿ ಹಾಗೂ ಆಟುಮನ್ 2.14 ಕೆಜಿ ತೂಕವಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ.ಮಣಿಪುರದ ಇರೋಮ್ ಶರ್ಮಿಳಾ ಅವರು ಗರ್ಭಿಣಿಯಾದಾಗಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ವಿಶ್ವ ಅಮ್ಮಂದಿರ ದಿನವೇ (ಮೇ 12) ರಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯ ವೈದ್ಯರಾದ ಡಾ. ಶ್ರೀಪಾದ ವೀಣೆಕರ್ ಮತ್ತು ತಂಡದಿಂದ ಹೆರಿಗೆ ಮಾಡಿಸಿದ್ದರು.ಇರೋಮ್ ಶರ್ಮಿಳಾ ಚಾನು ತಮ್ಮ ಬಹುಕಾಲದ ಸಂಗಾತಿ ಡೆಸ್ಮಂಡ್ ಕುಟಿನ್ಹೊ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ಡೆಸ್ಮಂಡ್ ಕುಟಿನ್ಹೊ ಮೂಲತಃ ಬ್ರಿಟಿಷ್ ನಾಗರೀಕರಾಗಿದ್ದು, ವಿಶೇಷ ವಿವಾಹ ಕಾಯ್ದೆ ಅಡಿ ಇರೋಮ್ ಶರ್ಮಿಳಾ ಅವರನ್ನು ಆಗ ಉಪ ನೋಂದಣಾಧಿಕಾರಿಯಾಗಿದ್ದ ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ವಿವಾಹವಾಗಿದ್ದರು.ಇರೋಮ್ ಶರ್ಮಿಳಾ ಅವರ ಹುಟ್ಟೂರು ಇಂಫಾಲ್. ಅವರು ಮಣಿಪುರದ ಉಕ್ಕಿನ ಮಹಿಳೆ, ನಾಗರಿಕ ಹಕ್ಕುಗಳ ಕಾರ್ಯಕರ್ತೆ, ಕವಯಿತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಸಶಸ್ತ್ರಪಡೆಯ (ವಿಶೇಷ ಅಧಿಕಾರ) ಕಾಯಿದೆ 1958 ಅನ್ನು ವಾಪಸ್ ಪಡೆಯಲು ಆಗ್ರಹಿಸಿ 2000 ನವೆಂಬರ್ 3ರಿಂದ ನಿರಶನ ಆರಂಭಿಸಿ 15 ವರ್ಷಗಳ ಕಾಲ ಮುಂದುವರಿಸಿ ಗಟ್ಟಿತನ ತೋರಿದ್ದರು. ರಾಜ್ಯದಲ್ಲಿ ಸಶಸ್ತ್ರಪಡೆಯು ವಿಶೇಷಾಧಿಕಾರ ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ, ಅಮಾಯಕರ ಹತ್ಯೆಯಲ್ಲಿ ತೊಡಗಿರುವುದರ ವಿರುದ್ಧ ಸಿಡಿದೆದ್ದು ಏಕಾಂಗಿಯಾಗಿ ಅಹಿಂಸಾತ್ಮಕ ಪ್ರತಿಭಟನೆ ಕೈಗೊಂಡಿದ್ದರು.2014ರ ಆಗಸ್ಟ್ 9ರಂದು ಇರೋಮ್ ಶರ್ಮಿಳಾ ತಮ್ಮ ಉಪವಾಸ ಅಂತ್ಯಗೊಳಿಸಿ ವಿಧಾನಸಭಾ ಚುನಾವಣೆಗೆ ನಿಂತಿದ್ದರು. ಆದರೆ ಕೇವಲ 90 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದರು. ಅದಾದ ಬಳಿಕ ಅವರು ರಾಜಕೀಯದಿಂದಲೇ ಬಹುತೇಕ ದೂರ ಸರಿದರು.Sign in to your account
Username or Email Address


Password

 Remember Me


