ಬೆಂಗಳೂರು: ಪ್ರಕಾಶ್ ಹೆಬ್ಬಾಳ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಪ್ರಥಮ ಬಾರಿ ನಿರ್ದೇಶನ ಮಾಡಿರುವ ‘ಹಫ್ತಾ’ ಚಿತ್ರದ ಹಾಡುಗಳು ಅನಾವರಣಗೊಂಡಿವೆ. ಹಫ್ತಾ ಚಿತ್ರಕ್ಕೆ ಸೆಂಟಿಮೆಂಟ್ ನಾಟ್ ಅಲೌಡ್ ಎಂಬ ಟ್ಯಾಗ್ ಲೈನ್ ಎಂದು ನೀಡಲಾಗಿದೆ. ಗೌತಮ್ ಶ್ರೀವತ್ಸ ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರಕ್ಕೆ ವಿಜಯ್ ಯಾಡ್ರ್ಲಿ ಒಂದು ಡ್ಯುಯೆಟ್ ಮತ್ತು ಪ್ಯಾಥೋ ಹಾಡಿಗೆ ರಾಗ ಸಂಯೋಜಿಸಿದ್ದಾರೆ.ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಯಾರೂ ನಿರೀಕ್ಷಿಸದ ಪ್ರಮುಖ ವಿಷಯವನ್ನು ಸೇರಿಸಿ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ದುಷ್ಟರನ್ನು ಸಂಹಾರ ಮಾಡಲು ದುಷ್ಟನೇ ಬರಬೇಕೆನ್ನುವ ಫಾರ್ಮುಲಾ ಈ ಚಿತ್ರದ್ದಾಗಿದೆ. ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ, ಖಳನಟನಾಗಿ ನಟಿಸಿದ್ದ ವರ್ಧನ್ ತೀರ್ಥಹಳ್ಳಿ ಮೊದಲ ಬಾರಿ ನಾಯಕನಾಗಿ ಎರಡು ಶೇಡ್‍ಗಳಲ್ಲಿ ಅದರಲ್ಲೂ ಒಂದು ಹಂತದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವುದು ವಿಶೇಷ.ಬುದ್ಧಿವಂತಿಕೆಯಿಂದ ಅಪರಾಧದ ಸುಳಿವು ಸಿಗದಂತೆ ಸೈಲೆಂಟ್ ಕಿಲ್ಲರ್. ಇವನದು ಏನಿದ್ದರೂ ಗನ್ ಮಾತಾಡುತ್ತೆ ಎನ್ನುವ ಪಾತ್ರದಲ್ಲಿ ರಾಘವ ನಾಗ್ ನಟಿಸಿದ್ದಾರೆ. ಭರತನಾಟ್ಯ ವಿದ್ಯಾರ್ಥಿಯಾಗಿ ಬಿಂಬ ಶ್ರೀ ನೀನಾಸಂ ಅವರಿಗೆ ರಾಮರಾಮರೇ ನಂತರ ನಾಯಕಿಯಾಗಿ ಅವಕಾಶ ಸಿಕ್ಕಿದೆಯಂತೆ. ಕೂರ್ಗ್ ಮೂಲದ ಸೌಮ್ಯ ತಿತೀರ ಚೊಚ್ಚಲ ಚಿತ್ರದಲ್ಲೇ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮುಖ್ಯ ಖಳನಾಯಕನಾಗಿ ಬಾಲ್‍ರಾಜ್ ವಾಡಿ ಉಳಿದಂತೆ ದಶಾವರ ಚಂದ್ರು, ಉಗ್ರಂ ರವಿ ಮುಂತಾದವರು ತಂಡದಲ್ಲಿ ಇದ್ದಾರೆ. ಛಾಯಾಗ್ರಹಣ ಸೂರಿ ಸಿನಿಟೆಕ್, ಸಂಕಲನ ರಘುನಾಥ್ ಎಲ್. ನಿರ್ವಹಿಸಿದ್ದಾರೆ.ಸಿಡಿ ಬಿಡುಗಡೆ ಮಾಡಿದ ಲಹರಿವೇಲು ಮಾತನಾಡಿ, ಒಂದು ಕಾಲದಲ್ಲಿ ಸೂಪರ್ ಕಾಪ್ ಪೋಲೀಸ್ ಅಧಿಕಾರಿಗಳು ಈ ಪದವನ್ನು ಉಪಯೋಗಿಸುತ್ತಿದ್ದುದನ್ನು ಕೇಳಿದ್ದೇನೆ. ಈಗ ನೋಡಿದರೆ ಇದೇ ಹೆಸರಿನಲ್ಲಿ ಸಿನಿಮಾ ಸಿದ್ಧಗೊಂಡಿದೆ. ತಂಡಕ್ಕೆ ಒಳ್ಳೆಯದಾಗಲಿ ಎಂದರು. ನಿರ್ಮಾಪಕನಾಗಿ ಇದು ನನ್ನ ಎರಡನೆ ಪ್ರಯತ್ನ. ಕತೆ ಚೆನ್ನಾಗಿರುವುದರಿಂದಲೇ ಹಣ ಹೂಡಿದ್ದೇನೆ ಎಂದು ಮೈತ್ರಿ ಕಟ್ಟಡಗಳ ಮಾಲೀಕ ಮೈತ್ರಿ ಮಂಜುನಾಥ್ ಕೋರಿದರು. ಸಹ ನಿರ್ಮಾಪಕ ಬಾಲರಾಜ್ ಟಿ.ಸಿ.ಪಾಳ್ಯ, ಅತಿಥಿಗಳಾಗಿ ಚಕ್ರಪಾಣಿ, ದಾಪಿ ಆಂಜನಪ್ಪ, ದಯಾಳ್ ಆಗಮಿಸಿದ್ದರು. ಯು/ಎ ಪ್ರಮಾಣ ಪತ್ರ ಪಡೆದುಕೊಂಡಿರುವ ಸಿನಿಮಾವನ್ನು ಸದ್ಯದಲ್ಲೇ ಜನರಿಗೆ ತೋರಿಸಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


