ಉಡುಪಿ: ಪಲಿಮಾರು ಮಠದ ನೂತನ ಉತ್ತರಾಧಿಕಾರಿಗೆ ಇಂದು ಪಟ್ಟಾಭಿಷೇಕವಾಗಿದೆ. ಕೃಷ್ಣಮಠದ ಸರ್ವಜ್ಞ ಪೀಠದ ಮುಂದೆ, ಮಾಧ್ವ ಪರಂಪರೆಯ ಗಣ್ಯ ಮಠಾಧೀಶರ ಉಪಸ್ಥಿತಿಯಲ್ಲಿ ಈ ಅಪೂರ್ವ ಕಾರ್ಯಕ್ರಮ ನಡೆಯಿತು.ಪರ್ಯಾಯದ ಅವಧಿಯಲ್ಲೇ ಪಲಿಮಾರು ಸ್ವಾಮಿಗಳು ಶಿಷ್ಯ ಸ್ವೀಕಾರ ಮಾಡಿ ಯತಿಪೀಠದ ಮೆರುಗು ಹೆಚ್ಚಿಸಿದ್ದಾರೆ. ಹೌದು. ಉಡುಪಿಯ ಅಷ್ಟಮಠಗಳಲ್ಲಿ ಪಲಿಮಾರು ಮಠವೂ ಒಂದಾಗಿದ್ದು, ಸದ್ಯ ಕೃಷ್ಣ ಪೂಜೆಯನ್ನು ಇದೇ ಮಠದ ಯತಿ ವಿದ್ಯಾಧೀಶ ಶ್ರೀಗಳು ಮಾಡುತ್ತಿದ್ದಾರೆ. ಐದು ದಿನಗಳ ಕಾಲ ಹಲವು ವಿಧಿವಿಧಾನ ನಡೆದು ಪಟ್ಟಾಭಿಷೇಕ ಸಂಪನ್ನಗೊಂಡಿದೆ.ಮಠದ 31 ನೇ ಉತ್ತರಾಧಿಕಾರಿಯಾಗಿ ವಿದ್ಯಾರಾಜೇಶ್ವರ ತೀರ್ಥರು ಅಧಿಕಾರ ವಹಿಸಿದ್ದಾರೆ. ಕಳೆದ ಎಂಟ್ನೂರು ವರ್ಷಗಳಲ್ಲಿ 30 ಯತಿಗಳು ಈ ಮಠಕ್ಕೆ ಮಠಾಧೀಶರಾಗಿದ್ದಾರೆ. ಸದ್ಯ ಕೃಷ್ಣಪೂಜೆಯನ್ನು ನಡೆಸುತ್ತಿರುವ ಪಲಿಮಾರು ವಿದ್ಯಾಧೀಶ ತೀರ್ಥರು ಈ ಪರಂಪರೆಯ ಮೂವತ್ತನೆಯ ಯತಿಯಾಗಿದ್ದಾರೆ. ಇದೀಗ ಅವರು ಶಿಷ್ಯ ಸ್ವೀಕಾರ ಮಾಡಿದ್ದು 31ನೇ ಯತಿಯ ಪಟ್ಟಾಭಿಷೇಕ ಇಂದು ನಡೆಯಿತು.ಕಳೆದ ನಾಲ್ಕು ದಿನಗಳಿಂದಲೂ ವಿವಿಧ ಧಾರ್ಮಿಕ ಕಾಯಕ್ರಮಗಳು ಆಯೋಜನೆಗೊಂಡಿತ್ತು. ಇಂದು ನವಯತಿಯ ರಾಜಗಾಂಭೀರ್ಯದ ಪಟ್ಟಾಭಿಷೇಕ ಜರುಗಿತು. ಕೃಷ್ಣ ದೇವರಿಗೆ ಮಹಾಪೂಜೆಯ ನಂತರ ಸನ್ನಿಧಾನದಲ್ಲಿ ಚತುರ್ವೇದ, ಭಾಗವತ, ಭಗವದ್ಗೀತೆ – ರಾಮಾಯಣ ಮೊದಲಾದ ಗ್ರಂಥಗಳ ಪಾರಾಯಣ ನಡೆಯಿತು.ಮಹಿಳೆಯರು ಲಕ್ಷ್ಮೀ ಶೋಭಾನೆ ಪಠಿಸಿದರು. ಇದೇ ವೇಳೆಯಲ್ಲಿ ಪಲಿಮಾರು ಮಠದ ಹಿರಿಯ ಸ್ವಾಮೀಜಿ ವಿದ್ಯಾಧೀಶ ತೀರ್ಥರು, ಕೃಷ್ಣ-ವೇದವ್ಯಾಸರ ವಿಗ್ರಹ ಹಾಗೂ ವಿಶ್ವಂಭರ ಸಾಲಿಗ್ರಾಮವನ್ನು ನೂತನ ಶಿಷ್ಯನ ತಲೆಯ ಮೇಲಿಟ್ಟು ಅಭಿಷೇಕ ಮಾಡಿದರು. ಭಕ್ತರ ಜಯಘೋಷದ ನಡುವೆ, ಪಲಿಮಾರು ಮಠದ ಉತ್ತರಾಧಿಕಾರಿಗೆ ವಿದ್ಯಾ ರಾಜೇಶ್ವರ ತೀರ್ಥ ಎಂಬ ನಾಮಕರಣ ಮಾಡಲಾಯಿತು.ಮಾಧ್ವ ಯತಿ ಪರಂಪರೆಯಲ್ಲಿ ಇದೊಂದು ಅಪೂರ್ವ ಸಂದರ್ಭ. ಪರ್ಯಾಯದ ಸಂದರ್ಭದಲ್ಲೇ ಸರ್ವಜ್ಞ ಪೀಠದ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕವಾಗಿದ್ದು ವಿಶೇಷ. ಈ ವೇಳೆಯಲ್ಲಿ ಪೇಜಾವರ ಸ್ವಾಮಿಗಳ ಹಿರಿತನದಲ್ಲಿ ಕೃಷ್ಣಾಪುರ, ಕಾಣಿಯೂರು, ಸೋದೆ, ಅದಮಾರು, ಸುಬ್ರಹ್ಮಣ್ಯ, ಭೀಮನಕಟ್ಟೆ ಮಠದ ಸ್ವಾಮಿಗಳು ಹಾಜರಿದ್ದು ನವಯತಿಯನ್ನು ಹರಸಿದರು. ಅಷ್ಟಮಠದ ಮಠಾಧೀಶರು ಸರ್ವಜ್ಞ ಪೀಠದ ಸುತ್ತಲೂ ಕುಳಿತು ನವಯತಿಗೆ ಶುಭ ಹಾರೈಸಿ, ಆಶೀರ್ವಾದ ಮಾಡಿದರು.ಈ ಸಂದರ್ಭ ಲೋಕ ಕಲ್ಯಾಣಾರ್ಥ ಪ್ರಾರ್ಥನೆಯೂ ನೆರವೇರಿತು. ದೇಶ ಮತ್ತು ಈ ದೇಶವನ್ನು ಮುಂದಕ್ಕೆ ಆಳಲಿರುವ ಪ್ರಧಾನ ಮಂತ್ರಿಗೆ ಒಳಿತಾಗಲಿ ಎಂದು ಸಾಮೂಹಿಕ ಮಂಗಲಾಷ್ಟಕ ಪಠನವೂ ನಡೆಯಿತು. ಕಳೆದ ಕೆಲವು ದಿನಗಳಿಂದ ಕೃಷ್ಣಮಠ ಹಾಗೂ ಅಷ್ಟಮಠಗಳ ರಥಬೀದಿಯಲ್ಲಿ ಹೊಸ ಯತಿಯನ್ನು ಬರಮಾಡಿಕೊಳ್ಳುವ ಸಂಭ್ರಮ ಮನೆಮಾಡಿದೆ. ವಟು ಶೈಲೇಶ ಉಪಾಧ್ಯಾಯ ಇನ್ನು ಮುಂದೆ ವಿದ್ಯಾ ರಾಜೇಶ್ವರನಾಗಿ ಭಕ್ತರ ಸೇವೆಗೆ ಲಭ್ಯರಾಗಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಪ್ರಸಿದ್ಧ ಕ್ಷೇತ್ರದ ಗೌರವ ಕಾಪಾಡುವ ನಿಟ್ಟಿನಲ್ಲಿ ಈ ಕೃಷ್ಣಪೂಜಕ ಯತಿ ಯಶಸ್ವಿಯಾಗಲಿ ಎಂದು ಸಾವಿರಾರು ಭಕ್ತರ ಹಾರೈಸಿದರು.Sign in to your account
Username or Email Address


Password

 Remember Me


