ಮಂಡ್ಯ: ಬಸ್ ದುರಂತದಲ್ಲಿ ಮೃತಪಟ್ಟ ತನ್ನಿಬ್ಬರ ಹೆಣ್ಣು ಮಕ್ಕಳ ಸಮಾಧಿಯ ಬಳಿ ಹೋಗಿ ಕುಳಿತು ಮಕ್ಕಳಿಗಾಗಿ ಗೋಳಾಡುತ್ತಿರುವ ಮನಕಲಕುವ ಘಟನೆಯೊಂದು ಮಂಡ್ಯದಲ್ಲಿ ಕಂಡುಬಂದಿದೆ.ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೋಡಿ ಶೆಟ್ಟಿಪುರ ಗ್ರಾಮದ ದೇವರಾಜು ಮತ್ತು ಪವಿತ್ರ ದಂಪತಿಗೆ ಕಲ್ಪನ(6) ಮತ್ತು ಸೌಮ್ಯ(4) ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದರು. ಅಜ್ಜಿಯ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಬಸ್ ದುರಂತ ಪ್ರಕರಣದಲ್ಲಿ ಅಜ್ಜಿಯೊಂದಿಗೆ ತಾವು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.ಇತ್ತ ಇದ್ದ ಇಬ್ಬರೇ ಹೆಣ್ಣು ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಯ ಬದುಕು ನಿತ್ಯ ನರಕವಾಗಿ ಹೋಗಿದೆ. ದೇವರಾಜು ಬಾರದ ಲೋಕಕ್ಕೆ ಹೋದ ತನ್ನ ಮುದ್ದಾದ ಎರಡು ಹೆಣ್ಣು ಮಕ್ಕಳನ್ನು ಮಣ್ಣು ಮಾಡಿ ಅವರ ಸಮಾಧಿಯ ಮುಂದೆ ಕರುಳು ಹಿಂಡುವಂತೆ ರೋಧಿಸುತ್ತಿದ್ದಾರೆ.ನವೆಂಬರ್ 24 ರಂದು ಕೋಡಿ ಶೆಟ್ಟಿಪುರ ಗ್ರಾಮಕ್ಕೆ ಬಂದಿದ್ದ ಪವಿತ್ರ ಅವರ ತಾಯಿ 55 ವರ್ಷದ ಜಯಮ್ಮ ಮೊಮ್ಮಕ್ಕಳನ್ನು ನನ್ನ ಜೊತೆ ಊರಿಗೆ ಕಳುಹಿಸಿಕೊಡು, ಅವರು ಒಂದೆರೆಡು ದಿನ ಇದ್ದು ಬರುತ್ತಾರೆ ಎಂದು ಹೇಳಿ ಕರೆದುಕೊಂಡು ಹೋಗಿದ್ದರು. ಆದರೆ ಅವರು ಹೊರಟ ಖಾಸಗಿ ಬಸ್ ಪಾಂಡವಪುರ ತಾಲೂಕಿನ, ಕನಗನಮರಡಿ ಗ್ರಾಮದ ಬಳಿ ನಾಲೆಗೆ ಬಿದ್ದು 30 ಜನ ಜಲಸಮಾಧಿಯಾಗಿದರು. ಹಾಗೇ ಜಲಸಮಾಧಿಯಾದವರಲ್ಲಿ ಅಜ್ಜಿ ಮತ್ತು ಮೊಮ್ಮಕ್ಕಳೂ ಸೇರಿದ್ದು, ಇದ್ದ ಇಬ್ಬರೇ ಇಬ್ಬರು ಹೆಣ್ಣು ಮಕ್ಕಳನ್ನು ಕಳೆದುಕೊಂಡು ತಂದೆ-ತಾಯಿ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ.ಕಲ್ಪನ ಮತ್ತು ಸೌಮ್ಯ ಇಬ್ಬರೂ ಹೆಣ್ಣು ಮಕ್ಕಳು ತಂದೆ-ತಾಯಿಯಷ್ಟೇ ಅಲ್ಲದೇ ಸುತ್ತಮುತ್ತಲ ಮನೆಯವರ ಪ್ರೀತಿಯ ಮಕ್ಕಳಾಗಿದ್ದರು. ಅವರ ತುಂಟಾಟ, ಆಟೋಟವನ್ನು ನೆನೆದು ಇಡೀ ಊರಿನ ಜನರೇ ಅಯ್ಯೋ ಅಂತಿದ್ದಾರೆ. ಮೃತ ಮಕ್ಕಳ ತಂದೆಯಂತೂ ಪ್ರತಿ ದಿನವೂ ತನ್ನ ಮಕ್ಕಳ ಸಮಾಧಿಯ ಬಳಿ ತೆರಳಿ ಇಬ್ಬರ ಸಮಾಧಿಯ ಮಧ್ಯೆ ಕುಳಿತು ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂತಿದೆ.ಬಸ್ ದುರಂತದಲ್ಲಿ 30 ಜನ ಸಾವನ್ನಪ್ಪಿ ಐದು ದಿನ ಕಳೆದರೂ ತಮ್ಮವರನ್ನು ಕಳೆದುಕೊಂಡ ಕುಟುಂಬದಲ್ಲಿ ನೋವು ಮಾತ್ರ ಕಡಿಮೆಯಾಗಿಲ್ಲ. ತಮ್ಮದಲ್ಲದ ತಪ್ಪಿಗೆ ಪ್ರಾಣ ತೆತ್ತ 30 ಜನರ ಕುಟುಂಬದ ಸಂಕಟ ನೋಡಿ ಕ್ರೂರ ವಿಧಿಗೆ ಮಂಡ್ಯ ಜನ ಹಿಡಿಶಾಪ ಹಾಕುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


