ಬೆಂಗಳೂರು: ಸಿಲಿಕಾನ್ ಸಿಟಿ ಪೋಷಕರೇ ಎಚ್ಚರವಾಗಿರಿ. ನಿಮ್ಮ ಮಕ್ಕಳಿಗೆ ಯಾವುದೇ ಸಂಸ್ಥೆ ವಿತರಿಸುವ ಬುಕ್ ಗಳ ಮೇಲೆ ಗಮನ ಹರಿಸಿ.ಖಾಸಗಿ ಸಂಸ್ಥೆಯೊಂದು ಕಾಮಿಕ್ ಬುಕ್‍ನಲ್ಲಿ ಅಶ್ಲೀಲ ಚಿತ್ರವಿರುವ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿ ವಿವಾದಕ್ಕೀಡಾಗಿದೆ. ನಗರದ ವೈಟ್ ಫೀಲ್ಡ್ ನ ಕೆಟಿಪಿಒ ಸಭಾಂಗಣದಲ್ಲಿ ನ. 17 ಹಾಗೂ 18ರಂದು ಕಾಮಿಕ್ ಕಾನ್ ಇಂಡಿಯಾ (ಸಿಸಿಬಿಐ) ಸಂಸ್ಥೆ 7ನೇ ಆವೃತ್ತಿಯ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಂಡಿತ್ತು.ಈ ಕಾರ್ಯಕ್ರಮದಲ್ಲಿ 6 ರಿಂದ 18 ವರ್ಷದ ಒಳಗಿನ ನೂರಾರು ಮಕ್ಕಳು ಭಾಗಿಯಾಗಿದ್ದರು. ಟಿಕೆಟ್ ಪಡೆದು ಭಾಗವಹಿಸಿದ್ದ ಪ್ರತಿ ವಿದ್ಯಾರ್ಥಿಗೆ ಸಂಸ್ಥೆ ವತಿಯಿಂದ ಕಾಮಿಕ್ ಬುಕ್, ಟಿ-ಶರ್ಟ್, ಬ್ಯಾಡ್ಜ್ ಹಾಗೂ ಪೋಸ್ಟರ್ ಇರುವ ಕಿಟ್ ನೀಡಿತ್ತು. ಇದರಲ್ಲಿ ಅಮೆರಿಕ ಲೇಖಕ ಬ್ರಿಯಾನ್ ಕೆ. ವೌಘನ್ ಅವರು ಬರೆದಿರುವ ಕಾಮಿಕ್ ಪುಸ್ತಕದಲ್ಲಿ ಅಶ್ಲೀಲ ಚಿತ್ರಗಳಿದ್ದು, ಈ ಪುಸ್ತಕವನ್ನು ಮಕ್ಕಳಿಗೆ ವಿತರಿಸಲಾಗಿತ್ತು.ಬೆಳಕಿಗೆ ಬಂದಿದ್ದು ಹೇಗೆ?
ಈ ಕಾರ್ಯಕ್ರಮದಲ್ಲಿ ಇಂದಿರಾನಗರ ನಿವಾಸಿಯಾಗಿರುವ 16 ವರ್ಷದ ಬಾಲಕಿಯೊಬ್ಬಳು ಭಾಗವಹಿಸಿದ್ದಳು. ಗುರುವಾರ ಬೆಳಗ್ಗೆ ಬಾಲಕಿಯ ತಾಯಿ ಮನೆಯನ್ನು ಶುಚಿಗೊಳಿಸುವಾಗ ಅಲ್ಲಿಯೇ ಇದ್ದ ಸಂಸ್ಥೆಯ ನೀಡಿದ್ದ ಕಿಟ್ ಅನ್ನು ಕುತೂಹಲದಿಂದ ತೆಗೆದು ನೋಡಿದ್ದಾರೆ.ಈ ವೇಳೆ ಪುಸ್ತಕದಲ್ಲಿದ್ದ ಅಶ್ಲೀಲ ಚಿತ್ರಗಳನ್ನು ನೋಡಿ ಬಾಲಕಿಯ ತಾಯಿ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಕೂಡಲೇ ವಿದ್ಯಾರ್ಥಿಗಳಿಗೆ ಈ ಚಿತ್ರಗಳಿರುವ ಪುಸ್ತಕಗಳನ್ನು ವಿತರಣೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿ ಸಂಸ್ಥೆಗೆ ಸಂದೇಶ ಕಳುಹಿಸಿ ಸ್ಪಷ್ಟನೆ ಕೇಳಿದ್ದಾರೆ. ಈ ಕುರಿತು ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಬಾಲಕಿಯ ತಾಯಿ ತಕ್ಷಣ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಸದ್ಯ ಈ ಬಗ್ಗೆ ಕಾಮಿಕ್ ಕಾನ್ ಇಂಡಿಯಾ ಸಂಸ್ಥೆ ಪ್ರತಿಕ್ರಿಯಿಸಿ ಕ್ಷಮೆ ಕೇಳಿದೆ.ಕಳೆದ ಏಳು ವರ್ಷದಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆಯಲಿಲ್ಲ. ನಮಗೆ ತಿಳಿಯದೇ ಇಂತಹ ಅಶ್ಲೀಲ ಚಿತ್ರಗಳು ಬಂದಿದೆ ಎಂದು ಸಂಸ್ಥೆ ಕ್ಷಮೆಯಾಚಿಸಿದೆ. ಸಂಸ್ಥೆ ಕ್ಷಮೆ ಕೇಳಿದ್ದರೂ ಸುಮ್ಮನಾಗದ ಪೋಷಕರು ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂಸ್ಥೆ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 293 (ಮಕ್ಕಳಿಗೆ ಅಶ್ಲೀಲ ಪುಸ್ತಕ ಮಾರಾಟ) ಅಡಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


