ಬೆಂಗಳೂರು: ಪ್ರೇಯಸಿಯ ಜೊತೆ ಪ್ರವಾಸಕ್ಕೆ ಬಂದಿದ್ದ ಪ್ರೇಮಿಯೊಬ್ಬನ ಮುಂಗೈಯನ್ನು ಕತ್ತರಿಸಿದ ಅಮಾನವೀಯ ಘಟನೆ ನಗರದ ಹೊರವಲಯದ ಬನ್ನೇರುಘಟ್ಟದ ಬೆಟ್ಟದ ಬಳಿ ನಡೆದಿದೆ.ಚಿತ್ರದುರ್ಗ ಮೂಲದ ರವೀಶ್ (23) ಕೈ ಕಳೆದುಕೊಂಡ ಪ್ರೇಮಿ. ರವೀಶ್ ಆನೇಕಲ್ ತಾಲೂಕಿನ ಯಾರಂಡಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಪ್ರೇಯಸಿ ಕೂಡಾ ಚಿತ್ರದುರ್ಗದ ಮೂಲದವಳಾಗಿದ್ದು, ನಗರದಲ್ಲಿಯೇ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾಳೆ. ಕೈ ಕತ್ತರಿಸಿ ಪರಾರಿಯಾದ ದುಷ್ಕರ್ಮಿಗಳ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಇವತ್ತೇನಾಯ್ತು?
ಇಂದು ಇಬ್ಬರು ಸೇರಿ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಾಲಯದ ಹಿಂಭಾಗದಿಂದ ಸುವರ್ಣಮುಖಿ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಲ್ಲಿಗೆ ಅರಣ್ಯ ಪ್ರದೇಶದ 3 ಕಿ.ಮೀ. ಕಾಲು ದಾರಿಯ ಮೂಲಕವೇ ಹೋಗಬೇಕು. ಈ ವೇಳೆ ದಾರಿ ಮಧ್ಯದಲ್ಲಿಯೇ ಕೆಲ ದುಷ್ಕರ್ಮಿಗಳು ಲಾಂಗು ಹಾಗೂ ಮಚ್ಚು ಬಳಸಿ, ಯುವಕನ ಬಲಭಾಗದ ಮುಂಗೈ ಕತ್ತರಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದೇ ವಿಕೃತಿ ಮೆರೆದ ದುಷ್ಕರ್ಮಿಗಳು ಕತ್ತರಿಸಿ ಕೈಯನ್ನು ಕೊಂಡೊಯ್ದಿದ್ದಾರೆ.ಕೈ ಕಳೆದುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಪ್ರಿಯಕರನನ್ನು ಕಾಪಾಡಿ ಎಂದು ಯುವತಿ ಸ್ಥಳೀಯರಲ್ಲಿ ಕೇಳಿಕೊಂಡಿದ್ದಾಳೆ. ಬಳಿಕ ಸ್ಥಳೀಯರ ಸಹಾಯದಿಂದ ರವೀಶ್ ನನ್ನು ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದ ರವೀಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಸದ್ಯ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಘಟನೆಯಿಂದಾಗಿ ಯುವತಿ ಗಾಬರಿಗೊಂಡಿದ್ದು, ದಾಳಿ ಮಾಡಿದವರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಎಷ್ಟು ಜನ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಕೇಳಿದ ಪ್ರಶ್ನೆಗೆ ಒಂದು ಬಾರಿ ಇಬ್ಬರು ಎಂದರೆ, ಮತ್ತೊಮ್ಮೆ ಮೂವರು ಎಂದು ಹೇಳುತ್ತಿದ್ದಾಳೆ. ಯಾವುದೇ ಮಾಹಿತಿ ಕೇಳಿದರೂ ಗೊಂದಲದ ಉತ್ತರ ನೀಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


