ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಆರ್ಭಟಿಸಿದೆ. ಸಿನಿಮಾ ಸ್ಟೈಲ್‍ನಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿದ್ದು, ದುಷ್ಕರ್ಮಿಗಳ ದಾಳಿಗೆ ತುತ್ತಾಗಿದ್ದ ಮಹಿಳೆ ಕೂದಲೆಳೆಯ ಅಂತರದಲ್ಲಿ ಸಾವು ಗೆದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.ನಗರದ ವಿದ್ಯಾರಣ್ಯಪುರದ ಹನುಮಾನ್ ಲೇಔಟ್‍ನಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ಸ್ಪ್ಲೆಂಡರ್ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸಿಂಧು ಎಂಬವರ ಮೇಲೆ ಎರಡು ಸುತ್ತು ಫೈರ್ ಮಾಡಿ, ಎಸ್ಕೇಪ್ ಆಗಿದ್ದಾರೆ. ಈ ಘಟನೆಯಲ್ಲಿ ಸಿಂಧು ಕೂದಲೆಳೆಯ ಅಂತರದಲ್ಲಿ ಸಾವು ಗೆದ್ದಿದ್ದಾರೆ. ಆದರೆ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸಿಂಧು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಹನುಮಾನ್ ಲೇಔಟ್ ನಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಕೆಲಸದ ಬಳಿಕ ಹನುಮಾನ್ ಲೇಔಟ್‍ನ 1 ನೇ ಅಡ್ಡರಸ್ತೆಯಲ್ಲಿರುವ ಅಕ್ಕನ ಮನೆಯಲ್ಲಿದ್ದ ಇಬ್ಬರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಸ್ಕೂಟಿಯಲ್ಲಿ ಬಂದಿದ್ದರು. ಈ ವೇಳೆ ಒಂಟಿಯಾಗಿ ಹೋಗುತ್ತಿದ್ದ ಸಿಂಧು ಮೇಲೆ ಇಬ್ಬರು ಆಗಂತುಕರು ದಾಳಿ ಮಾಡಿ, ಅವರ ಬಳಿ ಇದ್ದ ವ್ಯಾನಿಟಿ ಬ್ಯಾಗ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಆಗ ಸಿಂಧು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಬೈಕ್ ಹಿಂಬದಿ ಕುಳಿತಿದ್ದ ಸುಲಿಗೆಕೋರ ತನ್ನ ಬಳಿ ಇದ್ದ ಗನ್‍ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಈ ವೇಳೆ ಸಿಂಧು ಕಿರುಚಾಡಿಕೊಂಡಿದ್ದರಿಂದ ಗಾಬರಿಗೊಂಡ ಆರೋಪಿಗಳಿಬ್ಬರು ಎಸ್ಕೇಪ್ ಆಗಿದ್ದಾರೆ ಎಂದು ಈಶಾನ್ಯ ವಿಭಾಗ ಡಿಸಿಪಿ ಗಿರೀಶ್ ಹೇಳಿದ್ದಾರೆ.ಈ ಘಟನೆ ಬಳಿಕ ವಿದ್ಯಾರಣ್ಯಪುರ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫೈರಿಂಗ್ ಆಗಿರೋದು ದೃಢಪಟ್ಟ ಬಳಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಮತ್ತು ಶ್ವಾನ ದಳ ಸಿಬ್ಬಂದಿ ಕೂಡ ಪರಿಶೀಲನೆ ನಡೆಸಿದ್ದಾರೆ.ಈ ಘಟನೆ ಕುರಿತು ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೆಲ ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ಕೆಲ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇರೆಗೆ ತನಿಖೆ ಮುಂದುವರೆಸಿದ್ದಾರೆ. ಸದ್ಯಕ್ಕೆ ಸುಲಿಗೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.






 Advertisement 




Sign in to your account
Username or Email Address


Password

 Remember Me


