ಮಂಡ್ಯ: ರಸ್ತೆಯಲ್ಲಿ ರಾಗಿ ಒಕ್ಕಣೆಗೆ ಹಾಕಿದ್ದ ಹುಲ್ಲಿನಿಂದ ಕಾರು ಹೊತ್ತಿ ಉರಿದು, ಐವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ರಾಜೇನಹಳ್ಳಿ ಗ್ರಾಮದ ಬಳಿ ನಡೆದಿದೆ.ಬೆಂಗಳೂರು ಮೂಲದ ಐವರು ಭೂವರಹನಾಥಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಬೂಕನಕೆರೆ ಹೋಬಳಿ ರಾಜೇನಹಳ್ಳಿ ಬಳಿ ರೈತರು ರಾಗಿಯನ್ನು ಒಕ್ಕಣೆ ಮಾಡಲು ರಸ್ತೆಯಲ್ಲಿ ಹಾಕಿದ್ದ ಹುಲ್ಲು ಕಾರಿನ ಇಂಜಿನ್ ಗೆ ಸುತ್ತಿಕೊಂಡಿದೆ. ಕಾರಿಗೆ ಸುತ್ತಿಕೊಂಡಿದ್ದ ಹುಲ್ಲಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ವಿಚಾರ ತಿಳಿಯದ ಕಾರಿನವರು ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು.ಈ ಸಮಯದಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಬೈಕ್ ಸವಾರರೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ ನಿಲ್ಲಿಸಿ ಐವರು ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ಸಂಬಂಧ ಕೆ ಆರ್ ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


