ಚಿಕ್ಕೋಡಿ: ಖಾಸಗಿ ಶಾಲಾ ವಾಹನ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖೋತನಟ್ಟಿ ಕ್ರಾಸ್ ಬಳಿ ನಡೆದಿದೆ.ಐಗಳಿ ಗ್ರಾಮದ ಮಾಣಿಕ್ಯ ಪ್ರಭು ಶಾಲಾ ವಾಹನದಲ್ಲಿ ಖೋತನಟ್ಟಿ ಗ್ರಾಮದಿಂದ ಮಕ್ಕಳನ್ನು ಕರೆ ತರುವಾಗ ಸಂಕೇಶ್ವರ-ಜೇವರಗಿ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಬೈಕಿನಲ್ಲಿ ಮೂವರು ಖೋತನಟ್ಟಿಯಿಂದ ಐಗಳಿಗೆ ಹೋಗುತ್ತಿದ್ದರು. ಶಾಲಾ ವಾಹನ ವಿರುದ್ಧ ದಿಕ್ಕಿನಲ್ಲಿ ಐಗಳಿಯಿಂದ ಹೋಗುತ್ತಿದ್ದು, ರಾಜ್ಯ ಹೆದ್ದಾರಿ ಖೋತನಟ್ಟಿ ತಿರುವಿನಲ್ಲಿ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ.ಡಿಕ್ಕಿ ಹೊಡೆದ ರಭಸಕ್ಕೆ ಶಾಲಾ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೊಬ್ಬ ಬೈಕ್ ಸವಾರ ಹಾಗೂ ಶಾಲಾ ವಾಹನದ ಚಾಲಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.ಮೃತರನ್ನು ಯಲಿಹಡಲಗಿ ಗ್ರಾಮದ ದಾನಪ್ಪಾ ಮಗದುಮ್ಮ, ಮನೋಹರ ದೊಡ್ಡಮನಿ, ಅಪ್ಪಾಸಾಬ ಮರಾಠೆ, ವಾಹನ ಚಾಲಕ ಸಿದ್ದಗಿರಿ ಪೂಜಾರಿ ಎಂದು ಗುರುತಿಸಲಾಗಿದೆ. ಶಾಲಾ ವಾಹನದಲ್ಲಿದ್ದ 12 ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿದ್ದು, ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.ಗಂಭೀರವಾಗಿರುವ ಮಕ್ಕಳನ್ನು ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಣ್ಣ ಪುಟ್ಟ ಗಾಯವಾಗಿರುವ ಮಕ್ಕಳಿಗೆ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


