ಬೆಂಗಳೂರು: ಪ್ರಿಯಕರನ ಕಿರುಕುಳ ತಾಳಲಾರದೇ 17 ವರ್ಷದ ಯುವತಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯದ ಜಿಗಣಿಯಲ್ಲಿ ನಡೆದಿದೆ.ಪುಷ್ಪ ಆತ್ಮಹತ್ಯೆಗೆ ಶರಣಾದ ಯುವತಿ. ಮೂಲತಃ ಬನ್ನೇರುಘಟ್ಟದ ಶಾನುಭೋಗನಹಳ್ಳಿ ನಿವಾಸಿಯಾಗಿರುವ ಪುಷ್ಪ, ಜಿಗಣಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪುಷ್ಪ ಜಿಗಣಿಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದು, ಅದೇ ಕಾಲೇಜಿನಲ್ಲಿ ಓದುತ್ತಿದ್ದ ನಿಖಿಲ್ ಎಂಬ ಯುವಕನೊಂದಿಗೆ ಪ್ರೇಮಾಂಕುರವಾಗಿತ್ತು.ನಿಖಿಲ್ ಮದುವೆ ಆಗೋಣ ಎಂದು ಪುಷ್ಪಾಳನ್ನು ಪದೇ ಪದೇ ಪೀಡಿಸುತ್ತಿದ್ದ. ಆದರೆ ಪುಷ್ಪಾ ಮಾತ್ರ ಮನೆಯವರ ಒಪ್ಪಿಗೆ ಪಡೆದುಕೊಂಡು ಎಲ್ಲರ ಸಮ್ಮುಖದಲ್ಲಿ ವಿವಾಹವಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಳು. ಪುಷ್ಪಾಳ ಮಾತನ್ನು ಒಪ್ಪದ ನಿಖಿಲ್ ಮದುವೆ ಆಗುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.ಇತ್ತ ಪುಷ್ಪಾಳ ಪ್ರೀತಿಯ ವಿಷಯ ಮನೆಯಲ್ಲಿ ಗೊತ್ತಾದಾಗ ಆಕೆಯ ಪೋಷಕರು ಭಾರೀ ವಿರೋಧವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪುಷ್ಪಾ ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದಳು. ಈ ಸಂಬಂಧ ಪುಷ್ಪಾ ಪೋಷಕರು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು.ಇಂದು ಕಾಲೇಜಿನಿಂದ ಸ್ವಲ್ಪ ದೂರದಲ್ಲಿರುವ ಕೆರೆಯಲ್ಲಿ ಪುಷ್ಪಾ ಶವ ಪತ್ತೆಯಾಗಿದೆ. ಪುಷ್ಪಾ ತನ್ನ ಪ್ರಿಯಕರನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪುಷ್ಪಾಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


