ಹುಬ್ಬಳ್ಳಿ: ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿ ಹಾಗೂ ಕರುಳಿನ ಬಳ್ಳಿಯನ್ನು ಕೊಡಲಿಯಿಂದ ಹೊಡೆದು ಕ್ರೂರತೆ ಪ್ರದರ್ಶನ ಮಾಡಿದ್ದಾನೆ. ತನ್ನ ಒಂದು ವರ್ಷದ ಮಗುವಿನ ತಲೆಗೆ ಕೊಡಲಿಯಿಂದ ಹೊಡೆದು ಮಗು ಮತ್ತು ತಾಯಿ ಇಬ್ಬರು ಆಸ್ಪತ್ರೆ ಸೇರುವಂತೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ತಾಯಿ ಹಾಗೂ ಮಗು ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ.ಹುಬ್ಬಳ್ಳಿ ತಾಲೂಕಿನ ಶೇರೆವಾಡ ಗ್ರಾಮದ ನಿವಾಸಿ ಹನುಮಂತಪ್ಪ ಕೊಪ್ಪದ ಪತ್ನಿ ಹಾಗು ಮಗಳ ಮೇಲೆ ಹಲ್ಲೆ ಮಾಡಿದ ವ್ಯಕ್ತಿ. ಹನುಮಂತಪ್ಪ ನಾಲ್ಕು ವರ್ಷಗಳ ಹಿಂದೆ ಹಾವೇರಿ ಜಿಲ್ಲೆಯ ಬಂಟೂರು ಗ್ರಾಮದ ನಿವಾಸಿ ಅನ್ನಪೂರ್ಣ ಅವರನ್ನು ವಿವಾಹವಾಗಿದ್ದನು. ಇವರಿಗೆ ಮುದ್ದಾದ ಹೆಣ್ಣು ಮಗು ಸಹ ಇದೆ. ಮದುವೆಯ ನಂತರ ಹನುಮಂತಪ್ಪ ಹೆಂಡತಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದರು. ಶನಿವಾರ ರಾತ್ರಿ ಕುಡಿದು ಬಂದು ಹೆಂಡತಿ ಹಾಗು ಮಗುವಿನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.ಅನ್ನಪೂರ್ಣ ಅವರ ತಲೆಗೆ ಮತ್ತು ಮಗುವಿನ ಮುಖಕ್ಕೆ ಗಂಭೀರವಾದ ಗಾಯಗಳಾಗಿವೆ. ಗ್ರಾಮಸ್ಥರು ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಯ ಬಳಿಕ ಹನುಮಂತಪ್ಪ ನಾಪತ್ತೆಯಾಗಿದ್ದಾನೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹನುಮಂತಪ್ಪನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. Sign in to your account
Username or Email Address


Password

 Remember Me


