ಬೆಂಗಳೂರು: ನಗರದ ಬೆಳ್ಳಂದೂರು ಕೆರೆಯಲ್ಲಿ ಇಂದು ಬೆಳಿಗ್ಗೆ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಅತಂಕ ಮೂಡಿಸಿದೆ.ಬೆಳ್ಳಂದೂರಿನ ಇಬ್ಬಲೂರು ಸಮೀಪ ಗುರುವಾರದಂದು ಕೆರೆಯಲ್ಲಿ ಬೆಳೆದಿದ್ದ ಸೊಪ್ಪಿನ ಗಿಡಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಸಂಜೆ ಕೆರೆಯಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿತ್ತು. ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದರು. ಕೆರೆಯಲ್ಲಿ ಸುಟ್ಟ ಕರಕಲಾಗಿರುವ ಸೊಪ್ಪಿನ ಕಸ ಹಾಗೆ ಉಳಿದಿದ್ದು, ಇಂದು ಕೆರೆಯ ಪಕ್ಕದಲ್ಲಿ ಸಂಚರಿಸುವ ವಾಹನ ಸವಾರರು ಆಶ್ಚರ್ಯದಿಂದ ಕೆರೆಯತ್ತ ಮುಖಮಾಡಿ ಬೆಂಕಿ ಹೊತ್ತಿಕೊಂಡಿದ್ದ ಸ್ಥಳವನ್ನು ನೋಡಿಕೊಂಡು ತೆರಳುತ್ತಿದ್ದರು. ಆದ್ರೆ ಇಂದು ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಜನರ ಆತಂಕ ಹೆಚ್ಚಾಗಿದೆ.ಈ ಹಿಂದೆ ಬೆಳ್ಳಂದೂರು ಕೆರೆಯ ಯಮಲೂರು ಕೋಡಿ ಬಳಿ ಕೂಡ ವಿಷಪೂರಿತ ನೊರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದೇ ರೀತಿ ಕಳೆದ ಕೆಲ ದಿನಗಳ ಹಿಂದಷ್ಟೆ ವರ್ತೂರು ಕೆರೆಯಲ್ಲಿ ಸಹ ಜಂಬಿಗೆ ಬೆಂಕಿ ಹೊತ್ತಿಕೊಂಡು ಜನರಲ್ಲಿ ಅತಂಕ ಮೂಡಿಸಿತ್ತು.ಬೆಂಗಳೂರಿನ ಬಹುತೇಕ ಕಂಪನಿಗಳು ಹಾಗೂ ಅಪಾರ್ಟ್‍ಮೆಂಟ್‍ಗಳ ಕಲುಷಿತ ನೀರನ್ನು ಕೆರೆಗೆ ಬಿಡುತ್ತಿರುವುದರಿಂದ ವಿಷಪೂರಿತ ನೊರೆ ಹೆಚ್ಚಾಗಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪ್ರಧಾನಿ ಮೋದಿ ರವರು ಪರಿಸರ ತಜ್ಞರನ್ನು ಕಳಿಸಿದ್ದು, ಕೆರೆಯ ನೀರು ಕಲುಷಿತಗೊಂಡಿದ್ದು, ಇದು ಜನರಿಗೆ ಮಾರಕವಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ ಸರ್ಕಾರ ಹಾಗೂ ಬಿಬಿಎಂಪಿ ಇಲ್ಲಿಯತನಕ ಕೆರೆ ಅಭಿವೃದ್ಧಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇಷ್ಟೆಲ್ಲ ಅವಘಡಗಳಿಗೆ ಕಾರಣವಾಗುತ್ತಿದೆ. Sign in to your account
Username or Email Address


Password

 Remember Me


