ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಅಕ್ರಮ ಸಿಎಚ್ ಪೌಡರ್ ಸೇಂದಿ ದಂಧೆಗೆ ಈಗ ಅಪ್ರಾಪ್ತರು ಬಲಿಯಾಗುತ್ತಿದ್ದಾರೆ. ಎಗ್ಗಿಲ್ಲದೆ ರೈಲ್ವೆ ನಿಲ್ದಾಣದಲ್ಲೇ ಬಾಲಕರು ಕಲಬೆರಿಕೆ ಸೇಂದಿಯನ್ನ ಕುಡಿದು ತೂರಾಡುವ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.ಮಜ್ಜಿಗೆಯ ಹಾಗೇ ಕಾಣೋ ಕಲಬೆರಿಕೆ ಸಿಎಚ್ ಪೌಡರ್ ಸೇಂದಿ ಕ್ಲೋರಲ್ ಹೈಡ್ರೇಟ್ ರಾಸಾಯನಿಕದಿಂದ ತಯಾರಾಗೋ ಸ್ಲೋ ಪಾಯಿಸನ್. ಆಂಧ್ರ, ತೆಲಂಗಾಣದಲ್ಲಿ ಸಿಗುವ ಸೇಂದಿಯಲ್ಲಿ ಸಿಎಚ್ ಪೌಡರ್ ಬೆರಿಸಿ ಮಾರಾಟ ಮಾಡಲಾಗುತ್ತಿದೆ. ಇದನ್ನ ಕುಡಿಯಲು ರಾಯಚೂರು, ಯಾದಗಿರಿ ಜಿಲ್ಲೆಯಿಂದಲೂ ಚಿಕ್ಕಮಕ್ಕಳು, ಯುವಕರು ತೆಲಂಗಾಣದ ಕೃಷ್ಣಾ ಗ್ರಾಮಕ್ಕೆ ತೆರಳುತ್ತಾರೆ. ಕಂಠಪೂರ್ತಿ ಕುಡಿದು ಬಾಟಲ್‍ಗಳಲ್ಲಿ ಸೇಂದಿಯನ್ನ ತರುತ್ತಿದ್ದಾರೆ. ಅಕ್ರಮ ದಂಧೆಗೆ ಮಕ್ಕಳು, ವಯೋವೃದ್ಧರನ್ನ ಬಳಸಿಕೊಳ್ಳುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಈ ಹಿಂದೆಯೇ ವರದಿ ಮಾಡಿತ್ತು. ಆದ್ರೆ ಈಗ ಚಿಕ್ಕ ಮಕ್ಕಳೇ ಸೇಂದಿಗೆ ದಾಸರಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿದರೂ ಕೇಳುವವರಿಲ್ಲ.ರಾಜ್ಯದಲ್ಲಿ ಈಚಲು ಮರಗಳಿಂದ ಇಳಿಸುವ ಸೇಂದಿ ಮಾರಾಟ ನಿಷೇಧವಾದಾಗಿನಿಂದ ಅಕ್ರಮ ಸಿಎಚ್ ಪೌಡರ್ ಸೇಂದಿ ದಂಧೆ ಜೋರಾಗಿದೆ. ಇಷ್ಟು ದಿನ ಕೂಲಿ ಕಾರ್ಮಿಕರು, ದುಡಿದು ದಣಿವ ಬಡವರ್ಗದ ಜನ, ಸ್ಲಂ ನಿವಾಸಿಗಳು ಇದನ್ನ ಕುಡಿಯುತ್ತಿದ್ದರು. ಈಗ ಚಿಕ್ಕ ಚಿಕ್ಕ ಮಕ್ಕಳು ಸಹ ರಾಜಾರೋಷವಾಗಿ ರೈಲು ನಿಲ್ದಾಣದಲ್ಲೇ ಕುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು ಒಂದು ಸಾವಿರ ಜನರನ್ನ ಬಲಿ ತೆಗೆದುಕೊಂಡಿರುವ ಸೇಂದಿ ಪೊಲೀಸ್ ಹಾಗೂ ರೈಲ್ವೆ ಇಲಾಖೆ ನಿರ್ಲಕ್ಷ್ಯದಿಂದ ಈಗ ಮಕ್ಕಳನ್ನೂ ಬಲಿತೆಗೆದುಕೊಳ್ಳಲು ಮುಂದಾಗಿದೆ.ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನ್ ಸಿಂಗ್ ರಾಥೋರ್ ದಂಧೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದ್ರೆ ಸಿಎಚ್ ಪೌಡರ್ ಸಾಗಣೆ, ಮಾರಾಟ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಆಗಾಗ ಪೊಲೀಸರು ದಾಳಿ ನಡೆಸಿದಾಗ ಸುಮ್ಮನಾಗುವ ದಂಧೆಕೋರರು ಪುನಃ ದಂಧೆಗಿಳಿಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸಿಎಚ್ ಪೌಡರ್ ದಂಧೆ ತನ್ನ ವ್ಯಾಪ್ತಿಯನ್ನ ವಿಸ್ತರಿಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಮಾತ್ರ ಯಾವ ಗಂಭೀರ ಕ್ರಮಗಳಿಗೂ ಮುಂದಾಗುತ್ತಿಲ್ಲ. ಈಗಲಾದ್ರೂ ಚಿಕ್ಕ ಮಕ್ಕಳ ಭವಿಷ್ಯವನ್ನ ಕಾಪಾಡಲು ಸರ್ಕಾರ ಮುಂದಾಗಬೇಕಿದೆ. ಅಕ್ರಮ ದಂಧೆಗೆ ಅಂತ್ಯ ಕಾಣಿಸಬೇಕಿದೆ. Sign in to your account
Username or Email Address


Password

 Remember Me


